ADVERTISEMENT

ಇಸ್ಲಾಂ, ಕ್ರಿಶ್ಚಿಯನ್‌ಗೆ ಮತಾಂತರವಾದ ಪರಿಶಿಷ್ಟ ಜಾತಿ ಜನರ ಗುರುತಿಸಲು ಸಮಿತಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2022, 9:18 IST
Last Updated 19 ಸೆಪ್ಟೆಂಬರ್ 2022, 9:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹಿಂದು, ಸಿಖ್ ಹಾಗೂ ಬೌದ್ಧ ಧರ್ಮ ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರವಾದ ಪರಿಶಿಷ್ಟ ಜಾತಿ ಜನರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಯನ್ನು ತಿಳಿಯುವುದಕ್ಕಾಗಿ ಸಮಿತಿ ರಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಸಮಿತಿ ರಚಿಸುವ ಪ್ರಸ್ತಾವ ಈಗಾಗಲೇ ಸರ್ಕಾರದ ಮುಂದಿದೆ. ಈ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಸಮಿತಿ ರಚಿಸುವುದಕ್ಕೆ ಸಂಬಂಧಿಸಿ ಪ್ರಸ್ತಾವ ಸಲ್ಲಿಸಲು ಅನುಮತಿ ದೊರೆತಿದೆ. ಗೃಹ, ಕಾನೂನು, ಹಣಕಾಸು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿವೆ ಎಂದು ವರದಿ ಹೇಳಿದೆ.

ಮೂರು ಅಥವಾ ನಾಲ್ಕು ಮಂದಿ ಸದಸ್ಯರನ್ನೊಳಗೊಂಡ ಸಮಿತಿಗೆ ಕೇಂದ್ರ ಸಚಿವರೊಬ್ಬರು ಅಧ್ಯಕ್ಷರಾಗುವ ಸಾಧ್ಯತೆ ಇದೆ. ವರದಿ ಸಲ್ಲಿಸಲು ಸಮಿತಿಗೆ ಕಾಲಾವಕಾಶ ನಿಗದಿ ಮಾಡುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕ್ರಿಶ್ಚಿಯನ್ ಮತ್ತು ಇಸ್ಲಾಂಗೆ ಮತಾಂತರಗೊಂಡಿರುವ ದಲಿತರಿಗೆ ಮೀಸಲಾತಿ ನೀಡುವ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ವಿಚಾರಣೆಗೆ ಬಾಕಿ ಇವೆ. ಈ ವಿಚಾರದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಲು ಕೇಂದ್ರ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಅಕ್ಟೋಬರ್ 11ರ ವರೆಗೆ ಕಾಲವಕಾಶ ನೀಡಿದೆ.

ಸದ್ಯ ಅಸ್ತಿತ್ವದಲ್ಲಿರುವ ಕಾನೂನಿನ ಪ್ರಕಾರ ಹಿಂದು, ಬೌದ್ಧ ಹಾಗೂ ಸಿಖ್ ಧರ್ಮದವರನ್ನು ಹೊರತುಪಡಿಸಿ ಇತರ ಧರ್ಮಗಳ ಜನರನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.