ADVERTISEMENT

ವೈಯಕ್ತಿಕ ದತ್ತಾಂಶ ಭದ್ರತಾ ಮಸೂದೆ ವಾಪಸ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 21:00 IST
Last Updated 3 ಆಗಸ್ಟ್ 2022, 21:00 IST
ಸಚಿವ ಅಶ್ವಿನಿ ವೈಷ್ಣವ್ ಅವರು ಮಸೂದೆ ಹಿಂಪಡೆಯುವ ಗೊತ್ತುವಳಿ ಮಂಡಿಸಿದರು
ಸಚಿವ ಅಶ್ವಿನಿ ವೈಷ್ಣವ್ ಅವರು ಮಸೂದೆ ಹಿಂಪಡೆಯುವ ಗೊತ್ತುವಳಿ ಮಂಡಿಸಿದರು   

ನವದೆಹಲಿ: ‘ವೈಯಕ್ತಿಕ ದತ್ತಾಂಶ ಭದ್ರತಾ ಮಸೂದೆ–2019’ ಅನ್ನು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಬುಧವಾರ ವಾಪಸ್ ಪಡೆದಿದೆ. ಮಸೂದೆಯ ಪರಿಶೀಲನೆಗೆ ನೇಮಿಸಲಾಗಿದ್ದ ಸಂಸತ್ತಿನ ಜಂಟಿ ಸಂಸದೀಯ ಸಮಿತಿಯು (ಜೆಪಿಸಿ) 81 ತಿದ್ದುಪಡಿಗಳು ಹಾಗೂ 12 ಶಿಫಾರಸುಗಳನ್ನು ಸೂಚಿಸಿದ್ದರಿಂದ ಸರ್ಕಾರವು ಮಸೂದೆಯನ್ನು ಹಿಂಪಡೆದಿದೆ.

ಮಸೂದೆಯನ್ನು ವಾಪಸ್ ಪಡೆಯುವ ನಿಲುವಳಿ ಮಂಡಿಸಿದ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು,ಸಮಗ್ರ ಕಾನೂನಿನ ಚೌಕ್ಟಟ್ಟಿಗೆ ಹೊಂದುವ ಹೊಸ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುವುದಾಗಿ ಹೇಳಿದರು.

‘ಈ ಮಸೂದೆಯನ್ನು ಕೋವಿಡ್ ಮುನ್ನಾ ಕಾಲದಲ್ಲಿ ರೂಪಿಸಲಾಗಿತ್ತು. ಆದರೆ, ಈಗ ಪರಿಸ್ಥಿತಿ ಗಣನೀಯ ಪ್ರಮಾಣದಲ್ಲಿ ಬದಲಾಗಿದೆ. ಈ ಮಸೂದೆಯು ನವೋದ್ಯಮಗಳ ಬೆಳವಣಿಗೆಗೆ ಮಾರಕವಾಗಿತ್ತು. ಹೀಗಾಗಿ ಹೊಸ ಮಸೂದೆ ರಚಿಸಲಾಗುತ್ತದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಸಂಸತ್ತಿಗೆ ಹೊಸ ಮಸೂದೆ ಪರಿಚಯಿಸುವ ಮುನ್ನ, ಸಾರ್ವಜನಿಕರೊಂದಿಗೆಸರ್ಕಾರ ವಿಸ್ತೃತ ಸಮಾಲೋಚನೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಖಾಸಗಿತನ ಹಾಗೂ ಸೈಬರ್ ಭದ್ರತೆ ಕುರಿತ ಕೆಲವು ಕಾನೂನುಗಳನ್ನು ಹೊಸ ಮಸೂದೆಯು ಬದಲಿಸಲಿದೆ. ಚಳಿಗಾಲದ ಅಧಿವೇಶನದಲ್ಲಿ ಸಮಗ್ರ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ.

2019ರ ಡಿಸೆಂಬರ್ 11ರಂದು ಮಂಡಿಸಿದ್ದ ಮಸೂದೆಯನ್ನು ವಾಪಸ್ ಪಡೆಯಲು ಮುಂದಾಗಿರುವ ಕಾರಣಗಳನ್ನು ಸರ್ಕಾರವು ಸದಸ್ಯರ ಗಮನಕ್ಕೆ ತಂದಿತು. ಈ ಮಸೂದೆಯನ್ನು ಪರಿಶೀಲಿಸಲು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗಿತ್ತು. 2021ರ ಡಿಸೆಂಬರ್‌ನಲ್ಲಿ ಜಂಟಿ ಸಂಸದೀಯ ಸಮಿತಿಯು ತನ್ನ ವರದಿಯನ್ನು ಲೋಕಸಭೆಗೆ ಸಲ್ಲಿಸಿತ್ತು.

ಈ ಮಸೂದೆಯು ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡುವುದರ ಜೊತೆಗೆ, ತನಿಖಾ ಸಂಸ್ಥೆಗಳಿಗೆ ವಿನಾಯಿತಿ ನೀಡಿತ್ತು. ಈ ಅಂಶಗಳಿಗೆ ಪ್ರತಿಪಕ್ಷಗಳು ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಟ್ವೀಟ್ ಮಾಡಿರುವ ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ‘ಈಗಿನ ಹಾಗೂ ಭವಿಷ್ಯದ ಸವಾಲುಗಳನ್ನು ಎದುರಿಸಬಲ್ಲ ಡಿಜಿಟಲ್ ಖಾಸಗಿತನ ನಿಯಮಗಳು ಹಾಗೂ ಜಾಗತಿಕ ಮಾನದಂಡದ ಕಾನೂನುಗಳನ್ನು ಒಳಗೊಂಡ ಹೊಸ ಮಸೂದೆಯನ್ನು ತರಲಾಗುವುದು’ ಎಂದು ಹೇಳಿದ್ದಾರೆ.ಜೆಪಿಸಿ ವರದಿಯು ಗುರುತಿಸಿರುವ ಹಲವು ವಿಷಯಗಳು ಪ್ರಸ್ತುತವಾಗಿದ್ದರೂ, ಆಧುನಿಕ ಡಿಜಿಟಲ್ ಖಾಸಗಿನತ ಕಾನೂನುಗಳ ವ್ಯಾಪ್ತಿಯ ಆಚೆಗಿವೆ ಎಂದೂ ಅವರು ಹೇಳಿದ್ದಾರೆ.

ಸಂಸತ್ ಕಲಾಪದಲ್ಲಿ...

*ನ್ಯಾಷನಲ್ ರೈಲ್ ಆ್ಯಂಡ್‌ ಟ್ರಾನ್ಸ್‌ಪೋರ್ಟೇಷನ್ ಸಂಸ್ಥೆಯನ್ನು ಸ್ವಾಯತ್ತ ಕೇಂದ್ರೀಯ ವಿಶ್ವವಿದ್ಯಾಲಯವಾಗಿ ಮಾರ್ಪಾಡು ಮಾಡುವಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆಗೆ ಲೋಕಸಭೆ ಬುಧವಾರ ಅನುಮೋದನೆ ನೀಡಿತು. ಈ ವಿಶ್ವವಿದ್ಯಾಲಯವನ್ನು ‘ಗತಿಶಕ್ತಿ ವಿಶ್ವವಿದ್ಯಾಲಯ’ ಎಂದು ಕರೆಯಲಾಗುತ್ತದೆ

*ವಸತಿ ಸಮುಚ್ಚಯದಂಥ ಭಾರಿ ಕಟ್ಟಡಗಳು100 ಕಿಲೊವ್ಯಾಟ್‌ ವಿದ್ಯುತ್‌ಅನ್ನು ನವೀಕರಿಸಬುದಾದ ಶಕ್ತಿ ಮೂಲಗಳಿಂದ ಪಡೆಯುವುದನ್ನು ಕಡ್ಡಾಯ ಮಾಡಲು ಅನುವು ಮಾಡಿಕೊಡುವ ಇಂಧನ ಉಳಿತಾಯ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು

*ರಾಷ್ಟ್ರೀಯ ಉದ್ದೀಪನಮದ್ದು ಮಸೂದೆಗೆ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅನುಮೋದನೆ ಪಡೆಯಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.