ADVERTISEMENT

ಜಾತ್ಯತೀತ ರಾಷ್ಟ್ರವನ್ನು ಧಾರ್ಮಿಕ ರಾಷ್ಟ್ರವನ್ನಾಗಿಸಲು ಯತ್ನ: ಕೇರಳ ಸಿಎಂ ಕಳವಳ

ಪಿಟಿಐ
Published 9 ಫೆಬ್ರುವರಿ 2024, 10:33 IST
Last Updated 9 ಫೆಬ್ರುವರಿ 2024, 10:33 IST
ಕೇರಳ ಸಿಎಂ ಪಿಣರಾಯಿ ವಿಜಯನ್
ಕೇರಳ ಸಿಎಂ ಪಿಣರಾಯಿ ವಿಜಯನ್   

ಕಾಸರಗೋಡು: ದೇಶವನ್ನು ಜಾತ್ಯತೀತ ರಾಷ್ಟ್ರದಿಂದ ಧಾರ್ಮಿಕ ರಾಷ್ಟ್ರವನ್ನಾಗಿ ಪರಿವರ್ತಿಸಲು ಕೆಲವು ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಎಚ್ಚರಿಕೆ ಹಾಗೂ ಜಾಗರೂಕತೆಯಿಂದ ಮುನ್ನಡೆಯುವ ಅಗತ್ಯವಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

36ನೇ ಕೇರಳ ವಿಜ್ಞಾನ ಕಾಂಗ್ರೆಸ್‌ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಬೌದ್ಧಿಕ ಚಿಂತನೆಗಳ ಬದಲಿಗೆ ಕಟ್ಟುಕಥೆಗಳಿಗೆ ಆದ್ಯತೆ ನೀಡುವ ಮೂಲಕ ಕೆಲವು ವ್ಯಕ್ತಿಗಳು ನಮ್ಮ ಜಾತ್ಯತೀತ ರಾಷ್ಟ್ರವನ್ನು ಧಾರ್ಮಿಕವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ. ದುರದೃಷ್ಟವೆಂದರೆ, ಸಾಂವಿಧಾನಿಕ ಹುದ್ದೆಯಲ್ಲಿರುವ ಕೆಲವು ವ್ಯಕ್ತಿಗಳು ಇಂತಹ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಆದ್ದರಿಂದ ನಾವು ಜಾಗರೂಕತೆ ಹಾಗೂ ಎಚ್ಚರಿಕೆಯಿಂದ ಮುನ್ನಡೆಯಬೇಕಾಗಿದೆ’ ಎಂದು ಅವರು ತಿಳಿಸಿದ್ದಾರೆ.

ರಾಜ್ಯವು ಪ್ರಗತಿಪರವಾಗಿ ಮತ್ತು ವೈಜ್ಞಾನಿಕವಾಗಿ ಮುನ್ನಡೆಯುತ್ತಿದೆ. ಆದರೆ, ಸಮಾಜದಲ್ಲಿ ಅವೈಜ್ಞಾನಿಕ ಆಚರಣೆಗಳು ಹಾಗೂ ಚಿಂತನೆಗಳು ಹೆಚ್ಚಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಈ ಆಧುನಿಕ ಕಾಲದಲ್ಲೂ ರಾಜ್ಯದಲ್ಲಿ ನರಬಲಿಯಂತಹ ಹೇಯ ಕೃತ್ಯಗಳು ನಡೆಯುತ್ತಿವೆ. ಮೂಢನಂಬಿಕೆ ಚಿಂತನೆಗಳೂ ಹೆಚ್ಚುತ್ತಿವೆ. ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ, ಇವುಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಅದಕ್ಕಾಗಿ, ಇವುಗಳ ಕುರಿತು ಸಮಾಜದಲ್ಲಿ ವೈಜ್ಞಾನಿಕ ಜಾಗೃತಿಯನ್ನು ಮೂಡಿಸಬೇಕು. ಕೇರಳ ವಿಜ್ಞಾನ ಕಾಂಗ್ರೆಸ್‌ ಅಂತಹ ಪರಿಹಾರಗಳಲ್ಲಿ ಒಂದಾಗಿದೆ’ ಎಂದು ವಿಜಯನ್‌ ತಿಳಿಸಿದ್ದಾರೆ.

ಕೇರಳ ವಿಜ್ಞಾನ ಕಾಂಗ್ರೆಸ್‌ (ಕೆಎಸ್‌ಸಿ)ನ ಈ ವರ್ಷದ ಪರಿಕಲ್ಪನೆಯು ‘ಏಕರೂಪ ಆರೋಗ್ಯ ನೀತಿ ಮೂಲಕ ಕೇರಳ ಆರ್ಥಿಕತೆಯ ಪರಿವರ್ತನೆ’ ಎಂಬುದಾಗಿದೆ ಎಂದು ಅವರು ಹೇಳಿದ್ದಾರೆ.

ಮಾನವನ ಆರೋಗ್ಯವು, ಪರಿಸರ ಮತ್ತು ವನ್ಯಜೀವಿಗಳೊಂದಿಗೆ ಬೆಸೆದುಕೊಂಡಿರುವುದರಿಂದ ‘ಏಕರೂಪ ಆರೋಗ್ಯ ನೀತಿ’ಯು ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು 2021ರಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ‘ಒಂದು ಆರೋಗ್ಯ ನೀತಿ’ಯ ಮೊದಲ ಹಂತವನ್ನು ಜಾರಿಗೆ ತಂದಿದೆ ಅವರು ವಿವರಿಸಿದ್ದಾರೆ.

ಸುಸ್ಥಿರ ಅಭಿವೃದ್ಧಿ ಜತೆಗೆ ಶಿಕ್ಷಣ, ಆರೋಗ್ಯ ಮತ್ತು ಇತರ ವಿವಿಧ ಕ್ಷೇತ್ರಗಳಲ್ಲಿ ಕೇರಳವು ದೇಶದಲ್ಲೇ ಉತ್ತಮ ಉದಾಹರಣೆಯಾಗಿದೆ. ರಾಜ್ಯವು ತನ್ನ ಬಜೆಟ್‌ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ₹3,500 ಕೋಟಿ ಹಣವನ್ನು ಮೀಸಲಿಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.