ಲೈಂಗಿಕ ದೌರ್ಜನ್ಯ –ಪ್ರಾತಿನಿಧಿಕ ಚಿತ್ರ
ನವದೆಹಲಿ: ಸ್ವಾಮಿ ಚೈತನ್ಯಾನಂದ ಸರಸ್ವತಿ ಕುರಿತಂತೆ ಕೇಳಿಬಂದಿರುವ ಆರೋಪ ಹಾಗೂ ಸಂಸ್ಥೆಯು ತೆಗೆದುಕೊಂಡಿರುವ ಕ್ರಮಗಳ ಕುರಿತಂತೆ ದಿ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್–ರೀಸರ್ಚ್ ಸಂಸ್ಥೆಯು ನಾಲ್ಕು ಪುಟಗಳ ವಿಸ್ತೃತವಾದ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿದೆ.
‘ಅವರ ವಿರುದ್ಧ ಕೇಳಿಬಂದ ಕಿರುಕುಳ, ನಿರಂಕುಶ ಆಡಳಿತ ಹಾಗೂ ಹಣಕಾಸು ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಂಸ್ಥೆಯು ತ್ವರಿತವಾಗಿ ಕ್ರಮ ಕೈಗೊಂಡಿದ್ದು, ವಿದ್ಯಾರ್ಥಿಗಳ ಹಿತರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ವತಂತ್ರ ತಜ್ಞರಿಂದ ಸಂಸ್ಥೆಯ ಲೆಕ್ಕ ಪರಿಶೋಧನೆ ನಡೆಸಿದ ವೇಳೆ ಸ್ವಾಮಿ ಚೈತನ್ಯಾನಂದ ಅವರಿಂದ ಹಲವು ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ಇದರ ಆಧಾರದ ಮೇಲೆ 2025ರ ಜುಲೈ 19ರಂದೇ ಪೀಠವು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, 300 ಪುಟಗಳ ದಾಖಲೆಗಳನ್ನು ಸಲ್ಲಿಸಿದೆ’ ಎಂದು ತಿಳಿಸಿದೆ.
‘ಚೈತನ್ಯಾನಂದ ಅವರು ವಿದ್ಯಾರ್ಥಿನಿಯರಿಗೆ ನೀಡಿದ ಕಿರುಕುಳದ ಕುರಿತು ಶಿಕ್ಷಣ ನಿರ್ದೇಶನಾಲಯದ ಗ್ರೂಪ್ ಕ್ಯಾಪ್ಟನ್ ಅವರು ಆಗಸ್ಟ್ 1ರಂದು ಸಂಸ್ಥೆಗೆ ಇ–ಮೇಲ್ ಮೂಲಕ ತಿಳಿಸಿದ್ದರು. ವಿದ್ಯಾರ್ಥಿನಿಯರಿಗೆ ಅವರು ಕಳುಹಿಸಿದ್ದ ವಾಟ್ಸ್‌ಆ್ಯಪ್ ಸಂದೇಶ, ಇನ್ನಿತರ ದಾಖಲೆಗಳನ್ನು ಇ–ಮೇಲ್ ಮೂಲಕ ರವಾನಿಸಿದ್ದರು. ಇದರ ಆಧಾರದ ಮೇಲೆ ಆಡಳಿತ ಮಂಡಳಿಯು ಸಂತ್ರಸ್ತ ವಿದ್ಯಾರ್ಥಿನಿಯರ ಜೊತೆಗೆ ವರ್ಚುವಲ್ ಸಂವಾದದ ಮೂಲಕ ಮಾಹಿತಿ ಸಂಗ್ರಹಿಸಿ, ಎಲ್ಲ ವಿಚಾರಗಳನ್ನು ಪೊಲೀಸರಿಗೆ ನೀಡಿದೆ. ಚೈತನ್ಯಾನಂದ ಅವರಿಗೆ ನೀಡಲಾಗಿದ್ದ ಪವರ್ ಆಫ್ ಅಟಾರ್ನಿಯನ್ನು ರದ್ದುಗೊಳಿಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮಕ್ಕೂ ಸೂಚಿಸಲಾಗಿದೆ’ ಎಂದು ಹೇಳಿದೆ.
‘ಸ್ವಾಮಿ ಚೈತನ್ಯಾನಂದ ಅವರು ಶೃಂಗೇರಿ ಶಾರದಾ ಪೀಠದ ಸನ್ಯಾಸಿಯಾಗಿರಲಿಲ್ಲ. ಆದಿ ಶಂಕರಾಚಾರ್ಯರ ಪರಂಪರೆಯನ್ನೂ ಹೊಂದಿಲ್ಲ’ ಎಂದು ಪೀಠವು ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.