ADVERTISEMENT

Chandrayaan-3: ನೌಕೆಯಿಂದ ಯಶಸ್ವಿಯಾಗಿ ಪ್ರತ್ಯೇಕಗೊಂಡ ರೋವರ್ ಹೊತ್ತ ಲ್ಯಾಂಡರ್

ಪಿಟಿಐ
Published 17 ಆಗಸ್ಟ್ 2023, 9:11 IST
Last Updated 17 ಆಗಸ್ಟ್ 2023, 9:11 IST
   

ಬೆಂಗಳೂರು: ‘ಚಂದ್ರಯಾನ–3’ ರ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್‌ ಅನ್ನು ಪ್ರತ್ಯೇಕಿಸುವ ಪ್ರಕ್ರಿಯೆ ಗುರುವಾರ ಯಶಸ್ವಿಯಾಗಿ ನೆರವೇರಿತು ಎಂದು ಇಸ್ರೊ ಪ್ರಕಟಿಸಿದೆ.

ಚಂದ್ರನ ಅಂಗಳಕ್ಕೆ ಲ್ಯಾಂಡರ್‌ ಇಳಿಸುವ ಸರಣಿ ಪ್ರಕ್ರಿಯೆಯಲ್ಲಿ ಇದು ಮೊದಲ ಹೆಜ್ಜೆಯಾಗಿದೆ.  ನೋದನ ಘಟಕದಿಂದ (ಪ್ರೊಪಲ್ಷನ್‌ ಮಾಡ್ಯೂಲ್) ಲ್ಯಾಂಡರ್‌ ಪ್ರತ್ಯೇಕಗೊಂಡ ಬಳಿಕ ಎರಡೂ ಸ್ವತಂತ್ರ ಯಾನ ಆರಂಭಿಸಿವೆ. ನೋದನ ಘಟಕ ಈಗಿರುವ ಕಕ್ಷೆಯಲ್ಲೇ ಪರಿಭ್ರಮಣ ನಡೆಸಿದರೆ, ಲ್ಯಾಂಡರ್‌ ಘಟಕ ಚಂದ್ರನ ಅಂಗಳದತ್ತ ತನ್ನ ಯಾನ ಬೆಳೆಸಿದೆ.

ಲ್ಯಾಂಡರ್‌ ಮಾಡ್ಯೂಲ್‌ನಲ್ಲಿ  ಲ್ಯಾಂಡರ್‌ (ವಿಕ್ರಮ್‌) ಮತ್ತು ರೋವರ್‌ (ಪ್ರಗ್ಯಾನ್) ಅನ್ನು ಒಳಗೊಂಡಿದೆ. ಪ್ರತ್ಯೇಕಗೊಂಡ ಬಳಿಕ ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರಕ್ಕೆ ಒಯ್ಯುವ ಪ್ರಕ್ರಿಯೆಯನ್ನು ಇಸ್ರೊ ನಡೆಸಿದೆ. ಇದೇ 23 ರಂದು ಲ್ಯಾಂಡರ್‌ನ ಹಗುರ ಸ್ಪರ್ಶ ನಡೆಯಲಿದೆ.

ADVERTISEMENT

ನೌಕೆಯಿಂದ ಬೇರ್ಪಡೆ ಆಗುತ್ತಿದ್ದಂತೆ, ‘ಸವಾರಿಗೆ ಧನ್ಯವಾದ ಸಂಗಾತಿ’ ಎಂದು ಲ್ಯಾಂಡರ್‌ ಹೇಳಿದೆ. ಶುಕ್ರವಾರ(ಆ.18) ಸಂಜೆ ಸುಮಾರು 4 ಗಂಟೆಯ ವೇಳೆಗೆ ಲ್ಯಾಂಡರ್‌ನ ವೇಗವನ್ನು ತಗ್ಗಿಸಿ ಕೆಳ ಹಂತದ ಕಕ್ಷೆಗೆ ಇಳಿಸಲು ಉದ್ದೇಶಿಸಲಾಗಿದೆ ಎಂದು ಇಸ್ರೊ ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿದೆ.

ನೋದನ ಘಟಕದಿಂದ ಲ್ಯಾಂಡರ್‌ ಪ್ರತ್ಯೇಕಗೊಂಡ ಬಳಿಕ ಕಕ್ಷೆಯಲ್ಲಿ ಅದರ ವೇಗವನ್ನು ತಗ್ಗಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಇದಕ್ಕೆ ‘ಡೀಬೂಸ್ಟ್‌’ ಎಂದು ಕರೆಯಲಾಗುತ್ತದೆ. ಲ್ಯಾಂಡರ್‌ ಇಳಿಸುವುದಕ್ಕೆ ಮುನ್ನ ಬಾಹ್ಯಾಕಾಶ ನೌಕೆಯನ್ನು ಚಂದ್ರನಿಗೆ ಅತ್ಯಂತ ಸನಿಹದ ಬಿಂದು ಅಂದರೆ 30 ಕಿ.ಮೀ ಮತ್ತು ದೂರದ ಬಿಂದು 100 ಕಿ.ಮೀನಲ್ಲಿ ನೆಲೆಗೊಳಿಸಲಾಗುವುದು. ಇಲ್ಲಿಂದ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್‌ ಅನ್ನು ಇಳಿಸಲಾಗುತ್ತದೆ. ಇದಕ್ಕೆ ಸಾಫ್ಟ್‌ ಲ್ಯಾಂಡಿಂಗ್‌ ಎನ್ನಲಾಗುತ್ತದೆ. ಇನ್ನೊಂದೆಡೆ ನೋದನ ಘಟಕ ಈಗಿರುವ ಕಕ್ಷೆಯಲ್ಲೇ ತಿಂಗಳು/ವರ್ಷಗಟ್ಟಲೆ ಪರಿಭ್ರಮಣ ನಡೆಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.