ADVERTISEMENT

ಕೇರಳ ಕಾಂಗ್ರೆಸ್‌ ಆಂತರಿಕ ಕಲಹ: ಸೋನಿಯಾ ಭೇಟಿಯಾದ ಒಮ್ಮನ್ ಚಾಂಡಿ

ಪಕ್ಷ ಪುನಶ್ಚೇತನಗೊಳಿಸದಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 15:02 IST
Last Updated 17 ನವೆಂಬರ್ 2021, 15:02 IST
ಒಮ್ಮನ್‌ ಚಾಂಡಿ
ಒಮ್ಮನ್‌ ಚಾಂಡಿ   

ನವದೆಹಲಿ: ಕೇರಳದ ಕಾಂಗ್ರೆಸ್‌ ಆಂತರಿಕ ಕಲಹ ದೆಹಲಿಯನ್ನು ತಲುಪಿದೆ. ರಾಜ್ಯದಲ್ಲಿನ ಪಕ್ಷದ ನಾಯಕತ್ವದ ಬಗ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಒಮ್ಮನ್‌ ಚಾಂಡಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಬುಧವಾರ ಭೇಟಿ ಮಾಡಿ ಚುನಾವಣೆಯು ಘೋಷಣೆಯಾಗುವ ದೃಷ್ಟಿಯಿಂದ ಪಕ್ಷದ ಪುನಶ್ಚೇತನಕ್ಕೆ ಮುಂದಾಗದಂತೆ ಒತ್ತಾಯಿಸಿದ್ದಾರೆ.

ಇದಕ್ಕೂ ಮುನ್ನ ಪಕ್ಷದ ಹಿರಿಯ ನಾಯಕ ಎ.ಕೆ.ಆಂಟನಿ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ಮತ್ತು ಕೇರಳದ ಪಕ್ಷದ ಉಸ್ತುವಾರಿ ತಾರಿಖ್‌ ಅನ್ವರ್‌ ಅವರನ್ನು ಭೇಟಿಯಾಗಿ ಚುನಾವಣೆಗೂ ಮುನ್ನ ಪಕ್ಷದ ಪರಿಷ್ಕರಣೆ ಮಾಡುವುದಕ್ಕೂ ಮೊದಲು ಪಕ್ಷದ ನಾಯಕತ್ವ ತಮ್ಮನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.

ಚಾಂಡಿ ಅವರು ಸೋನಿಯಾ ಅವರ ಮುಂದೆ ತಮ್ಮ ಈ ಬೇಡಿಕೆಗಳನ್ನು ಪುನರುಚ್ಚರಿಸಿದರು. ಪಕ್ಷದ ನೂತನ ಮುಖ್ಯಸ್ಥ ಕೆ.ಸುಧಾಕರನ್‌ ಮತ್ತು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಸನ್‌ ಅವರು ಸಾಂಸ್ಥಿಕ ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.

ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್‌ನ ಚಾಂಡಿ ಮತ್ತು ರಮೇಶ್‌ ಚೆನ್ನಿತ್ತಾಲ ಬಣಗಳು ಪಕ್ಷದ ಹೊಸ ನಾಯಕತ್ವ ತಮ್ಮನ್ನು ಪಕ್ಕಕ್ಕೆ ಸರಿಸುತ್ತಿದೆ ಎಂದು ಭಾವಿಸಿವೆ. ಇಬ್ಬರೂ ಈಗ ಹೊಸ ನಾಯಕತ್ವದ ವಿರುದ್ಧ ಕೈಜೋಡಿಸಿದ್ದಾರೆ.

ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ಮತ್ತು ಸದಸ್ಯತ್ವ ಅಭಿಯಾನವನ್ನು ‍ಪ್ರಾರಂಭಿಸಿದ ಸಮಯದಲ್ಲಿ ಪಕ್ಷದ ಪುನಶ್ಚೇತನ ನಡೆಸುವುದು ವ್ಯರ್ಥ ಕೆಲಸ ಎಂದು ಚಾಂಡಿ ಅವರು ಸೋನಿಯಾ ಮೇಲೆ ಪ್ರಭಾವ ಬೀರಲು ಯತ್ನಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.