ADVERTISEMENT

ಚೆನಾಬ್‌ ಸೇತುವೆ ನಿರ್ಮಾಣಕ್ಕೆ ಐಐಎಸ್‌ಸಿ ಪ್ರಾಧ್ಯಾಪಕಿ ಮಾರ್ಗದರ್ಶನ

ಕಲ್ಯಾಣ್‌ ರೇ
Published 5 ಜೂನ್ 2025, 23:30 IST
Last Updated 5 ಜೂನ್ 2025, 23:30 IST
ಜಿ.ಮಾಧವಿ ಲತಾ
ಜಿ.ಮಾಧವಿ ಲತಾ   

ನವದೆಹಲಿ: ವಿಶ್ವದ ಅತ್ಯಂತ ಎತ್ತರದ ಚೆನಾಬ್‌ ಸೇತುವೆ ಎಂಜಿನಿಯರಿಂಗ್‌ ವಿಸ್ಮಯಕ್ಕೆ ನಿದರ್ಶನವಾಗಿದೆ. ಕಾಶ್ಮೀರಕ್ಕೆ ದೇಶದ ಇತರ ಭಾಗದೊಂದಿಗೆ ರೈಲು ಸಂಪರ್ಕ ಸಾಧ್ಯವಾಗಿಸುವ ಈ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸುವರು.

ದೇಶದ ಗಮನವನ್ನು ಸೆಳೆದಿರುವ ಈ ಸೇತುವೆ ನಿರ್ಮಾಣದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ಪ್ರಾಧ್ಯಾಪಕಿ ಜಿ.ಮಾಧವಿ ಲತಾ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂಬುದು ಅಷ್ಟೇ ಗಮನಾರ್ಹ.

ಕಳೆದ 17 ವರ್ಷಗಳಿಂದ ಈ ಯೋಜನೆಗೆ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ. ₹1,486 ಕೋಟಿ ವೆಚ್ಚದ ಈ ಸೇತುವೆ ನೂರು ವರ್ಷಗಳಿಗೂ ಹೆಚ್ಚು ಕಾಲ ಸದೃಢವಾಗಿ ನಿಲ್ಲುವುದನ್ನು ಖಾತ್ರಿಪಡಿಸುವ ನಿರ್ಮಾಣಕ್ಕೆ ಮಾರ್ಗದರ್ಶನ ನೀಡಿದ್ದಾರೆ.

ADVERTISEMENT

ಐಐಎಸ್‌ಸಿಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿರುವ ಮಾಧವಿ ಲತಾ ಅವರು, ‘ರಾಕ್‌ ಎಂಜಿನಿಯರಿಂಗ್‌’ ತಜ್ಞೆ.

ಉತ್ತರ ರೈಲ್ವೆ ಹಾಗೂ ಸೇತುವೆ ನಿರ್ಮಾಣದ ಗುತ್ತಿಗೆ ಪಡೆದ ಸಂಸ್ಥೆ ಅಫ್ಕಾನ್ಸ್‌, ಮಾಧವಿ ಲತಾ ಅವರನ್ನು ತಮ್ಮ ಯೋಜನೆಗೆ ಮಾರ್ಗದರ್ಶನ ನೀಡುವುದಕ್ಕೆ ನೇಮಕ ಮಾಡಿಕೊಂಡಿವೆ.

‘ಕಣಿವೆಯಲ್ಲಿ ಈ ಸೇತುವೆ ನಿರ್ಮಾಣ ಸಾಕಷ್ಟು ಸವಾಲಿನಿಂದ ಕೂಡಿತ್ತು. ಇಳಿಜಾರಿನಲ್ಲಿ ನಿರ್ಮಾಣ ಹಾಗೂ ಭದ್ರ ತಳಪಾಯ ಹಾಕುವ ಕಾರ್ಯಕ್ಕೆ ಐಐಎಸ್‌ಸಿ ಕನ್ಸಲ್ಟಂಟ್ ಆಗಿತ್ತು. ವಿದೇಶಿ ಕಂಪನಿಗಳು ಉಕ್ಕಿನ ಕಮಾನು ನಿರ್ಮಾಣ ಮಾಡಿವೆ’ ಎಂದು ಮಾಧವಿ ಲತಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಗದಿತ ವಿನ್ಯಾಸದಂತೆ ಸೇತುವೆ ನಿರ್ಮಾಣ ಕಷ್ಟವಾಗಿತ್ತು. ಹೀಗಾಗಿ, ನಿರ್ಮಾಣ ಕಾರ್ಯ ಆರಂಭಗೊಂಡ ಮೇಲೆ, ಅಗತ್ಯಕ್ಕೆ ತಕ್ಕಂತೆ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ’ ಎಂದೂ ಹೇಳಿದರು.

ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಮಾರ್ಗದಲ್ಲಿರುವ ಈ ಸೇತುವೆ ಉದ್ದ 1,315 ಮೀಟರ್. ಇದು ಈ ಮಾರ್ಗದ ಪ್ರಮುಖ ಭಾಗವೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.