
ಚೆನ್ನೈ ಪುಸ್ತಕ ಮೇಳ
ಚೆನ್ನೈ: ಚೆನ್ನೈ ಅಂತರರಾಷ್ಟ್ರೀಯ ಪುಸ್ತಕ ಮೇಳದ (ಸಿಐಬಿಎಫ್) ನಾಲ್ಕನೇ ಆವೃತ್ತಿಗೆ ನಗರ ಸಜ್ಜಾಗಿದ್ದು, ಜನವರಿ 16ರಿಂದ 18ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ಚೆನ್ನೈನ ಕಲೈವಾನರ್ ಅರಂಗಂ ಸಭಾಂಗಣದಲ್ಲಿ ನಡೆಯಲಿರುವ ಈ ಬೃಹತ್ ಪುಸ್ತಕ ಮೇಳದಲ್ಲಿ ಈ ಬಾರಿ ನೂರಕ್ಕೂ ಹೆಚ್ಚು ದೇಶಗಳ ಪ್ರಕಾಶಕರು, ಲಿಟರರಿ ಏಜೆಂಟರು ಮತ್ತು ಲೇಖಕರು ಭಾಗವಹಿಸುವ ನಿರೀಕ್ಷೆ ಇದೆ.
ತಮಿಳುನಾಡು ಸರ್ಕಾರವು 2023ರಿಂದ ಆರಂಭಿಸಿರುವ ಈ ಅಂತರರಾಷ್ಟ್ರೀಯ ಪುಸ್ತಕ ಮೇಳವು ಇದೀಗ ಜಾಗತಿಕ ಮಟ್ಟದಲ್ಲಿ ಪ್ರಕಾಶಕರ ಕೇಂದ್ರಬಿಂದುವಾಗಿದೆ. ತಮಿಳು ಸಾಹಿತ್ಯವನ್ನು ಜಾಗತಿಕಮಟ್ಟಕ್ಕೆ ಕೊಂಡೊಯ್ಯುವ ಹಾಗೂ ಜಾಗತಿಕ ಸಾಹಿತ್ಯವನ್ನು ತಮಿಳಿಗೆ ತರುವ ಉದ್ದೇಶವನ್ನು ಹೊಂದಿರುವ ಸಿಐಬಿಎಫ್‌ನ ಈ ವರ್ಷದ ಆವೃತ್ತಿಯು ‘ನಾಗರಿಕತೆಗಳ ನಡುವಿನ ಸಂವಹನ’ ಶೀರ್ಷಿಕೆಯಡಿ ಆಯೋಜಿತವಾಗಿದೆ.
ಜ. 16ರಂದು ಬೆಳಗ್ಗೆ 10ಕ್ಕೆ ಪುಸ್ತಕ ಮೇಳವನ್ನು ತಮಿಳುನಾಡಿನ ಶಾಲಾ ಶಿಕ್ಷಣ ಖಾತೆ ಸಚಿವ ಡಾ. ಅನ್ಬಿಲ್ ಮಹೇಶ್ ಪೊಯ್ಯಮೊಳಿ ಉದ್ಘಾಟಿಸಲಿದ್ದಾರೆ. ಕವಯತ್ರಿಯೂ ಆಗಿರುವ ಸಂಸದೆ ಕೆ. ಕನಿಮೊಳಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಕೇರಳದ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮೂರು ದಿನಗಳ ಕಾಲ ವಿವಿಧ ವಿಷಯಗಳ ಒಟ್ಟು 17 ಸಂವಾದ ಗೋಷ್ಠಿಗಳು ನಡೆಯಲಿದ್ದು, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಲೇಖಕರು ಮತ್ತು ಪ್ರಕಾಶಕರು ಪಾಲ್ಗೊಳ್ಳಲಿದ್ದಾರೆ. ಜ. 17ರ ‘ಫೋರ್ ಲ್ಯಾಂಗ್‌ವೇಜಸ್– ಒನ್ ಥಂಡರ್’ ಗೋಷ್ಠಿಯಲ್ಲಿ ಕನ್ನಡದ ಕವಯಿತ್ರಿ ಪ್ರತಿಭಾ ನಂದಕುಮಾರ್, ತೆಲುಗಿನ ಲೇಖಕ ರಾಜೇಂದ್ರ ಪ್ರಸಾದ್, ಮಲಯಾಳಂ ಲೇಖಕ ಎ.ಜೆ. ಥಾಮಸ್ ಪಾಲ್ಗೊಳ್ಳುವರು. ಕನ್ನಡದ ಲೇಖಕಿ ಡಾ.ಎಚ್.ಎಸ್. ಅನುಪಮಾ ಈ ಗೋಷ್ಠಿಯನ್ನು ನಿರ್ವಹಿಸುವರು. ಜ. 18ರ ‘ದ ಇನ್‌ವಿಸಿಬಲ್ ಹ್ಯಾಂಡ್’ ಗೋಷ್ಠಿಯಲ್ಲಿ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತೆ, ಅನುವಾದಕಿ ದೀಪಾ ಭಾಸ್ತಿ ಪಾಲ್ಗೊಳ್ಳಲಿದ್ದಾರೆ. ತಮಿಳಿನಿಂದ ಕನ್ನಡ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದವಾಗಿರುವ ಕೃತಿಗಳೂ ಈ ಪುಸ್ತಕ ಮೇಳದಲ್ಲಿ ಬಿಡುಗಡೆಯಾಗಲಿವೆ ಎಂದು ಸಿಐಬಿಎಫ್‌ನ ಆಯೋಜಕರು ತಿಳಿಸಿದ್ದಾರೆ.
ಸಿಐಬಿಎಫ್‌ಗೆ ಈ ಬಾರಿ ನೂರಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಆಗಮಿಸುತ್ತಿರುವುದು ದಕ್ಷಿಣ ಭಾರತದ ಅದರಲ್ಲೂ ತಮಿಳು ಸಾಹಿತ್ಯದ ಧ್ವನಿಯನ್ನು ಜಾಗತಿಕ ಸಾಹಿತ್ಯಲೋಕ ಆಲಿಸುತ್ತಿದೆ ಎಂಬುದರ ಪ್ರತೀಕವಾಗಿದೆ. ಈ ಪುಸ್ತಕ ಮೇಳವು ದಕ್ಷಿಣ ಏಷ್ಯಾದ ನೆಲೆಯಲ್ಲಿ ಜಗತ್ತನ್ನು ಅರಿಯುವ ಜಾಗತಿಕ ಪ್ರಕಾಶನ ಕೇಂದ್ರವಾಗಿ ಬದಲಾಗಿದೆಡಾ. ಬಿ. ಚಂದ್ರಮೋಹನ್ ಹೆಚ್ಚುವರಿ ಮುಖ್ಯ ಆಯುಕ್ತ ತಮಿಳುನಾಡು ಶಾಲಾ ಶಿಕ್ಷಣ ಇಲಾಖೆ
ತಮಿಳು ಸಾಹಿತ್ಯವನ್ನು ಜಾಗತಿಕಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ತಮಿಳುನಾಡು ಸರ್ಕಾರವು ‘ತಮಿಳುನಾಡು ಅನುವಾದ ಅನುದಾನ ಯೋಜನೆ’ಯನ್ನು ಆರಂಭಿಸಿದ್ದು ಅನುವಾದಕ್ಕಾಗಿ ಅನುದಾನದ ಜತೆಗೆ ಫೆಲೋಶಿಪ್ ಅನ್ನೂ ನೀಡುತ್ತಾ ಬಂದಿದೆ. ಈ ಯೋಜನೆಗಾಗಿಯೇ ₹3 ಕೋಟಿ ಮೊತ್ತದ ಅನುದಾನವನ್ನು ತಮಿಳುನಾಡು ಸರ್ಕಾರ ಮೀಸಲಿಟ್ಟಿದೆ. ತಮಿಳಿನ ಸಾಹಿತ್ಯಕ ಕೃತಿಗಳನ್ನು ಭಾರತದ ಇತರ ಭಾಷೆಗಳು ಹಾಗೂ ವಿದೇಶಿ ಭಾಷೆಗಳಿಗೆ ಅನುವಾದಿಸುವ ಯೋಜನೆ ಇದಾಗಿದೆ. ಭಾರತದ ಪ್ರಕಾಶಕರು ಹಾಗೂ ಹೊರ ದೇಶಗಳ ಪ್ರಕಾಶಕರೂ ಅನುದಾನ ಪಡೆಯಲು ಅರ್ಹರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.