
ಚೆನ್ನೈ: ಒಡಿಶಾದ ವಲಸೆ ಕಾರ್ಮಿಕ, 20 ವರ್ಷದ ಸೂರಜ್ ಮೇಲೆ, ಕಾನೂನು ಸಂಘರ್ಷಕ್ಕೆ ಒಳಗಾಗಿರುವ ನಾಲ್ವರು ಬಾಲಕರು ತಿರುವಳ್ಳೂರು ಜಿಲ್ಲೆಯ ತಿರುತ್ತಣಿಯಲ್ಲಿ ಕುಡುಗೋಲಿನಿಂದ ಭೀಕರವಾಗಿ ಹಲ್ಲೆ ಮಾಡಿದ್ದಾರೆ.
‘ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಈ ನಾಲ್ವರು ನಶೆಯಲ್ಲಿದ್ದರು ಎನ್ನಲಾಗಿದೆ. ಸೂರಜ್ ಮೇಲೆ ಮೂವರು ನಿರಂತರವಾಗಿ ಹಲ್ಲೆ ನಡೆಸುತ್ತಿದ್ದರೆ ಮತ್ತೊಬ್ಬ ಅದನ್ನು ಚಿತ್ರೀಕರಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನೂನು ಸಂಘರ್ಷಕ್ಕೆ ಒಳಗಾದ ನಾಲ್ವರು ಬಾಲಕರನ್ನು ಬಂಧಿಸಲಾಗಿದ್ದು, ಅವರನ್ನು ಚೆಂಗಲ್‌ಪಟ್ಟುವಿನಲ್ಲಿರುವ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಸೂರಜ್ ಮೇಲೆ ಹಲ್ಲೆ ನಡೆಸುತ್ತಿದ್ದ ದೃಶ್ಯಗಳಿರುವ ವಿಡಿಯೊ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.
‘ಸೂರಜ್, ಚೆನ್ನೈ–ತಿರುತ್ತಣಿ ಎಮು ರೈಲಿನ ಜನರಲ್ ಬೋಗಿಯಲ್ಲಿ ಶನಿವಾರ ಸಂಜೆ ಪ್ರಯಾಣಿಸುತ್ತಿದ್ದ. ನಶೆಯಲ್ಲಿದ್ದರು ಎನ್ನಲಾದ ಈ ನಾಲ್ವರು ಬಾಲಕರು, ಅರಕೋಣಂ ಸಮೀಪದ ತಿರುವಳಂಗಾಡು ರೈಲು ನಿಲ್ದಾಣದಲ್ಲಿ ರೈಲು ಏರಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಈ ನಾಲ್ವರು ಇನ್‌ಸ್ಟಾಗ್ರಾಮ್ ರೀಲ್‌ವೊಂದನ್ನು ಚಿತ್ರೀಕರಿಸಲು ಬಯಸಿದ್ದರು. ಇದಕ್ಕಾಗಿ ತಂದಿದ್ದ ಕುಡುಗೋಲುಗಳನ್ನು ತಮ್ಮ ಚೀಲಗಳಲ್ಲಿ ಮುಚ್ಚಿಟ್ಟಿದ್ದರು. ಇವರ ಪೈಕಿ ಒಬ್ಬಾತ ಸೂರಜ್ ಜೊತೆ ಮಾತು ಆರಂಭಿಸಿದ್ದಲ್ಲೇ, ಅತನ ಕುತ್ತಿಗೆ ಮೇಲೆ ಕುಡುಗೋಲು ಇಡಬಹುದೇ ಎಂದು ಕೇಳಿದ್ದಾನೆ. ಇದಕ್ಕೆ ಸೂರಜ್ ಆಕ್ಷೇಪಿಸಿದಾಗ, ಅವರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ತಿರುತ್ತಣಿ ರೈಲು ನಿಲ್ದಾಣ ಬರುವವರೆಗೂ ಮಾತಿನ ಚಕಮಕಿ ನಡೆದು, ವಿಕೋಪಕ್ಕೆ ಹೋಗಿದೆ’ ಎಂದು ತಿಳಿಸಿದ್ದಾರೆ.
‘ತಿರುತ್ತಣಿ ರೈಲು ನಿಲ್ದಾಣ ಬಂದ ಬಳಿಕ, ಯಾರೂ ವಾಸ ಮಾಡದೇ ಇರುವ ರೈಲ್ವೆ ಕ್ವಾರ್ಟರ್ಸ್‌ನತ್ತ ಬಲವಂತವಾಗಿ ಸೂರಜ್‌ನನ್ನು ಕರೆದುಕೊಂಡು ಹೋಗಿ, ಆತನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಹಲ್ಲೆಯಿಂದಾಗಿ ಸೂರಜ್‌ಗೆ ಪ್ರಜ್ಞೆ ತಪ್ಪಿತ್ತು. ಎಚ್ಚರಗೊಂಡ ಬಳಿಕ ನಿರ್ಜನ ಪ್ರದೇಶದಿಂದ ಹೊರಗೆ ಬಂದು, ಘಟನೆ ವಿವರಿಸಿದ್ದಾನೆ. ಆತನಿಗೆ ತಿರುತ್ತಣಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ, ತಿರುವಳ್ಳೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಆತ ಚೇತರಿಸಿಕೊಳ್ಳುತ್ತಿದ್ದಾನೆ’ ಎಂದು ತಿಳಿಸಿದ್ದಾರೆ.
ಟೀಕೆ: ಈ ಘಟನೆ ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವುದನ್ನು ತೋರಿಸುತ್ತದೆ ಎಂದು ವಿರೋಧ ಪಕ್ಷದ ನಾಯಕ ಇ.ಕೆ.ಪಳನಿಸ್ವಾಮಿ ಆರೋಪಿಸಿದ್ದಾರೆ.
‘ಸುಲಭವಾಗಿ ಡ್ರಗ್ಸ್‌ಗಳು ಲಭ್ಯವಾಗುವುದ, ಹಿಂಸೆಯ ವೈಭವೀಕರಣ, ವಲಸೆ ಕಾರ್ಮಿಕರ ವಿರುದ್ಧ ರಾಜಕೀಯ ಪ್ರೇರಿತ ಪ್ರಚಾರ ಈ ಸರ್ಕಾರದ ಅವಧಿಯಲ್ಲಿ ಸಾಮಾನ್ಯವಾಗಿದೆ’ ಎಂದು ಬಿಜೆಪಿಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ನಾಮಲೈ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.