ADVERTISEMENT

ಮಹಾರಾಷ್ಟ್ರ | ದೊರೆಯದ ಸಚಿವ ಸ್ಥಾನ: ಛಗನ್ ಭುಜಬಲ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 15:38 IST
Last Updated 16 ಡಿಸೆಂಬರ್ 2024, 15:38 IST
ಛಗನ್ ಭುಜಬಲ್
ಛಗನ್ ಭುಜಬಲ್   

ಮುಂಬೈ: ಮಹಾರಾಷ್ಟ್ರದ ಮಹಾಯುತಿ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿರುವುದಕ್ಕೆ ಹಿಂದುಳಿದ ವರ್ಗದ ಹಿರಿಯ ನಾಯಕ ಛಗನ್ ಭುಜಬಲ್‌ ಅಸಮಾಧಾನಗೊಂಡಿದ್ದಾರೆ.

‘ಹೌದು... ನಾನು ಅಸಮಾಧಾನಗೊಂಡಿದ್ದೇನೆ. ಕ್ಷೇತ್ರದ ಜನರು, ಪರಿಷತ್‌ ಹಾಗೂ ಬೆಂಬಲಿಗರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ’ ಎಂದಿದ್ದಾರೆ.

ಎನ್‌ಸಿಪಿ (ಅಜಿತ್‌ ಬಣ) ವರಿಷ್ಠರೂ ಆಗಿರುವ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಈ ಬಗ್ಗೆ ಮಾತನಾಡಿಲ್ಲ. ಭುಜಬಲ್‌ ಅವರು ಮಾಲಿ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ.

ADVERTISEMENT

‘ನನಗೆ ಸಚಿವ ಸ್ಥಾನ ನೀಡಬಹುದು ಅಥವಾ ನೀಡದಿರಬಹುದು. ಆದರೆ ಛಗನ್ ಭುಜಬಲ್‌ ಅವರ ರಾಜಕೀಯ ಮುಗಿದಿಲ್ಲ’ ಎಂದು ಸೋಮವಾರ ನಾಗ್ಪುರದಲ್ಲಿ ಪತ್ರಕರ್ತರಿಗೆ ತಿಳಿಸಿದರು.

‘ಹೊಸಬರಿಗೆ ಅವಕಾಶ ಕೊಡಲಿಕ್ಕಾಗಿ ನನ್ನನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಆದರೆ, ನನಗೆ ಬಹುಮಾನ ನೀಡಲಾಗಿದೆ (ಮರಾಠ ಮೀಸಲಾತಿ ಹೋರಾಟಗಾರಿ ಮನೋಜ್ ಜರಾಂಗೆ ಅವರಿಗೆ ಸವಾಲು ಹಾಕಿದ್ದಕ್ಕೆ). ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ನನ್ನನ್ನು ನಿರ್ಲಕ್ಷಿಸಿದರೆ ಅಥವಾ ಹೊರಹಾಕಿದರೆ ಅದು ಯಾವ ವ್ಯತ್ಯಾಸವಾಗಲಿದೆ’ ಎಂದರು.

ಮರಾಠ ಮೀಸಲಾತಿ ಬೇಡಿಕೆಯ ವಿರುದ್ಧ ಛಗನ್‌ ಭುಜಬಲ್‌ ಧ್ವನಿ ಎತ್ತಿದ್ದರು.

ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಭುಜಬಲ್ ಒಬ್ಬರು. ಮುಂಬೈನ ಮಝಗಾಂವ್‌ನಿಂದ ಎರಡು ಬಾರಿ ಶಾಸಕರಾಗಿದ್ದರೆ, ನಾಸಿಕ್‌ನ ಯೋಲಾದಿಂದ ಐದು ಬಾರಿ ಶಾಸಕರಾಗಿದ್ದಾರೆ. ಒಮ್ಮೆ ವಿಧಾನ ಪರಿಷತ್‌ನ ಸದಸ್ಯರು ಆಗಿದ್ದರು.

ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಯ ಡೆಮಾಕ್ರಟಿಕ್‌ ಫ್ರಂಟ್‌ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಹಿಂದುಳಿದ ವರ್ಗದ ಹಿರಿಯ ನಾಯಕ, ಅಖಿಲ ಭಾರತೀಯ ಮಹಾತ್ಮ ಫುಲೆ ಸಮತಾ ಪರಿಷತ್‌ನ ಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ.

ಈ ಹಿಂದಿನ ಮಹಾವಿಕಾಸ ಆಘಾಡಿ ಹಾಗೂ ಮಹಾಯುತಿ ಮೈತ್ರಿ ಸರ್ಕಾರದಲ್ಲೂ ಭುಜಬಲ್‌ ಸಚಿವರಾಗಿದ್ದರು.

 

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.