ನವದೆಹಲಿ: ಛತ್ ಪೂಜೆಯ ಕೊನೆ ದಿನವಾದ ಗುರುವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಯಮುನಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಯಮುನಾ ನದಿಯಲ್ಲಿ ನೀರು ಕಲುಷಿತಗೊಂಡಿದ್ದು, ವಿಷಪೂರಿತ ನೊರೆ ತೇಲುತ್ತಿದೆ. ಜನರು ನದಿಗೆ ಇಳಿಯುವುದನ್ನು ದೆಹಲಿ ಸರ್ಕಾರ ನಿಷೇಧಿಸಿತ್ತು. ಆದರೆ, ನೊರೆಯ ಪ್ರಮಾಣ ಕಡಿಮೆ ಮಾಡಲು ಟ್ಯಾಂಕರ್‌ಗಳ ಮೂಲಕ ನದಿಗೆ ನೀರು ಸಿಂಪಡಿಸಲಾಗುತ್ತಿದೆ. ಸರ್ಕಾರದ ಈ ಕ್ರಮಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ನದಿಯಲ್ಲಿನ ವಿಷದ ನೊರೆಯನ್ನು ಕರಗಿಸಲು ಕಲಿಂದಿ ಕುಂಜ್ ತಟದಲ್ಲಿ ಸರ್ಕಾರವು 15 ದೋಣಿಗಳನ್ನು ನಿಯೋಜಿಸಿದೆ. ಈ ನಡುವೆ ಹೆಚ್ಚಿನ ಜನರು ಛತ್ ಪೂಜೆಯ ಪ್ರಯುಕ್ತ ಕಲುಷಿತ ನದಿಯಲ್ಲಿ ಇಳಿದು, ಮುಳುಗುತ್ತಿರುವ ದೃಶ್ಯಗಳು ಕಂಡು ಬಂದಿವೆ.
ನದಿಯ ನೀರಿನಲ್ಲಿ ವಿಷಕಾರಕ ಅಂಶಗಳು ಹೆಚ್ಚಾಗಿರುವುದನ್ನು ನೊರೆಯು ಸೂಚಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅನಧಿಕೃತ ಕಾಲೊನಿಗಳಿಂದ ಕೊಳಚೆ ನೀರು ನದಿಗೆ ಹರಿಯುತ್ತಿದೆ ಹಾಗೂ ಜಲ ಶುದ್ಧೀಕರಣ ಘಟಕಗಳನ್ನು ಉನ್ನತ ದರ್ಜೆಗೆ ಏರಿಸುವವರೆಗೂ ಈ ಸ್ಥಿತಿ ಮುಂದುವರಿಯಲಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.