ADVERTISEMENT

ಹಿಮಾಚಲ ಪ್ರದೇಶಕ್ಕೆ ₹11‌ ಕೋಟಿ ಆರ್ಥಿಕ ನೆರವು ಘೋಷಿಸಿದ ಛತ್ತೀಸ್‌ಗಢ ಸಿಎಂ

ಪಿಟಿಐ
Published 18 ಆಗಸ್ಟ್ 2023, 7:31 IST
Last Updated 18 ಆಗಸ್ಟ್ 2023, 7:31 IST
ಹಿಮಾಚಲ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವುದು
ಹಿಮಾಚಲ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವುದು   ಪಿಟಿಐ ಚಿತ್ರ

ರಾಯ್‌ಪುರ: ಭಾರಿ ಮಳೆ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಹಿಮಾಚಲ ಪ್ರದೇಶಕ್ಕೆ ₹11 ಕೋಟಿ ಆರ್ಥಿಕ ನೆರವು ನೀಡುವುದಾಗಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಘೋಷಿಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಘೇಲ್‌ ಅವರು ಗುರುವಾರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಪರಿಸ್ಥಿತಿಯನ್ನು ಎದುರಿಸಲು ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

‘ದೇವಭೂಮಿ’ ಹಿಮಾಚಲ ಪ್ರದೇಶಕ್ಕೆ ತೀವ್ರ ಪ್ರಕೃತಿ ವಿಕೋಪ ಅಪ್ಪಳಿಸಿದ್ದು, ಈ ಪರಿಸ್ಥಿತಿಯಲ್ಲಿ ಛತ್ತೀಸ್‌ಗಢದ ಜನರು ಹಿಮಾಚಲ ಪ್ರದೇಶದ ಜನರೊಂದಿಗೆ ನಿಂತಿದ್ದಾರೆ ಎಂದು ಬಘೇಲ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ವಿಪತ್ತಿನ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿಗಾಗಿ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಛತ್ತೀಸ್‌ಗಢದ ಜನರ ಪರವಾಗಿ ₹11 ಕೋಟಿ ಹಣವನ್ನು ಬಿಡುಗಡೆ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ.

ಭಾನುವಾರ ರಾತ್ರಿಯಿಂದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಶಿಮ್ಲಾ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು ಸಾವಿನ ಸಂಖ್ಯೆ 74ಕ್ಕೆ ಏರಿಕೆ ಕಂಡಿದ್ದು, ಶಿಮ್ಲಾದಲ್ಲಿ 21 ಸಾವುಗಳು ಸಂಭವಿಸಿವೆ ಎಂದು ಹಿಮಾಚಲ ಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.