ADVERTISEMENT

ಛತ್ತೀಸಗಢ ಪತ್ರಕರ್ತನ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಸುರೇಶ್ ಪೊಲೀಸ್‌ ವಶಕ್ಕೆ

ಪಿಟಿಐ
Published 6 ಜನವರಿ 2025, 5:13 IST
Last Updated 6 ಜನವರಿ 2025, 5:13 IST
   

ರಾಯ್‌ಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಪತ್ರಕರ್ತನ ಹತ್ಯೆಯ ಪ್ರಮುಖ ಆರೋಪಿ ಸುರೇಶ್‌ ಚಂದ್ರಕರ್‌ ಎನ್ನುವಾತನನ್ನು ಹೈದರಾಬಾದ್‌ನಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ವಶಕ್ಕೆ ಪಡೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಪತ್ರಕರ್ತ ಮುಕೇಶ್‌ ಚಂದ್ರಕರ್‌ರನ್ನು ಹತ್ಯೆ ಮಾಡಿದ್ದ ಪ್ರಕರಣ ಜ.3 ರಂದು ಬೆಳಕಿಗೆ ಬಂದಿತ್ತು. ಆ ಬಳಿಕ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದ.

ವೃತ್ತಿಯಲ್ಲಿ ಗುತ್ತಿಗೆದಾರನಾಗಿರುವ ಆರೋಪಿ ಸುರೇಶ್‌ನನ್ನು ಪತ್ತೆ ಮಾಡಲು ಎಸ್‌ಐಟಿ ರಚನೆ ಮಾಡಲಾಗಿತ್ತು. ಭಾನುವಾರ ರಾತ್ರಿ ಅಧಿಕಾರಿಗಳು ಸುರೇಶ್‌ನನ್ನು ವಶಕ್ಕೆ ಪಡೆದಿದ್ದಾರೆ. 

ADVERTISEMENT

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸುರೇಶ್‌ ಸಹೋದರರಾದ ರಿತೇಶ್ ಚಂದ್ರಕರ್ ಮತ್ತು ದಿನೇಶ್ ಚಂದ್ರಕರ್ ಮತ್ತು ಮೇಲ್ವಿಚಾರಕ ಮಹೇಂದ್ರ ರಾಂಟೆಕೆ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ರಕರ್ತ ಮುಕೇಶ್‌ ಚಂದ್ರಕರ್ (33) ಜ.1 ರಂದು ನಾಪತ್ತೆಯಾಗಿದ್ದರು. ಜ.3 ರಂದು ಸುರೇಶ್‌ಗೆ ಸೇರಿದ್ದ ಜಾಗದಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. 

ಮುಕೇಶ್ ಚಂದ್ರಕರ್ ‘ಬಸ್ತಾರ್ ಜಂಕ್ಷನ್’ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ಹೊಂದಿದ್ದರು, ಜತೆಗೆ ಬೇರೆ ಬೇರೆ ಪತ್ರಿಕೆಗಳಿಗೆ ಬರೆಯುತ್ತಿದ್ದರು. ರಸ್ತೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ ನಂತರ ಅವರ ಹತ್ಯೆ ನಡೆದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.