ರಾಯಪುರ: ‘ಛತ್ತೀಸಗಢದಲ್ಲಿ ನಡೆದಿದೆ ಎನ್ನಲಾದ ಮದ್ಯ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಮಗ ಚೈತನ್ಯ ಬಘೇಲ್ ನೇರವಾಗಿ ಭಾಗಿಯಾಗಿದ್ದು, ಹಗರಣದ ಮೂಲಕ ಬಂದ ₹1,000 ಕೋಟಿ ಹಣವನ್ನು ವೈಯಕ್ತಿವಾಗಿ ನಿರ್ವಹಿಸಿದ್ದಾರೆ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿದೆ.
ಚೈತನ್ಯ ಅವರು ಈ ಜಾಲದ ಇತರ ಸದಸ್ಯರ ಜತೆಗೂಡಿ ಪಿತೂರಿ ನಡೆಸಿದ್ದಾರೆ ಮತ್ತು ಅಪರಾಧವನ್ನು ಮುಚ್ಚಿಹಾಕುವ ಪ್ರಯತ್ನಿಸಿದ್ದಾರೆ ಎಂದು ಹೇಳಿದೆ. ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಿಗೆ ಸೋಮವಾರ ಸಲ್ಲಿಸಿದ ನಾಲ್ಕನೇ ಪೂರಕ ಪ್ರಾಸಿಕ್ಯೂಷನ್ ದೂರಿನಲ್ಲಿ ಇ.ಡಿ ಈ ಅಂಶಗಳನ್ನು ಉಲ್ಲೇಖಿಸಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜುಲೈ 18ರಂದು ದುರ್ಗಾ ಜಿಲ್ಲೆಯ ಭಿಲಾಯ್ ಪಟ್ಟಣದಲ್ಲಿ ಚೈತನ್ಯ ಅವರನ್ನು ಬಂಧಿಸಿದ್ದರು. ಅದಕ್ಕೂ ಮೊದಲು ಅವರ ಮನೆಯಲ್ಲಿ ಶೋಧ ನಡೆಸಿದ್ದರು.
ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ (2019ರಿಂದ 2022) ಅವಧಿಯಲ್ಲಿ ₹2,500 ಕೋಟಿ ಮೊತ್ತದ ಮದ್ಯ ಹಗರಣ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಇದುವರೆಗೆ ಒಂದು ಪ್ರಾಸಿಕ್ಯೂಷನ್ ದೂರು ಅಲ್ಲದೆ, ನಾಲ್ಕು ಹೆಚ್ಚುವರಿ ದೂರುಗಳನ್ನು ಸಲ್ಲಿಸಿದೆ. ‘ಈ ಹಗರಣದಿಂದಾಗಿ ರಾಜ್ಯದ ಬೊಕ್ಕಸಕ್ಕೆ ತೀವ್ರ ನಷ್ಟವಾಗಿದೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.