ತಿರುವನಂತಪುರ: ಛತ್ತೀಸಗಢದಲ್ಲಿ ಬಂಧನಕ್ಕೊಳಗಾಗಿರುವ ಇಬ್ಬರು ನನ್‌ಗಳ ಸಹಾಯಕ್ಕೆ ಕೇರಳ ಬಿಜೆಪಿಯು ಪಕ್ಷದ ನಿಯೋಗವೊಂದನ್ನು ಕಳುಹಿಸಿದೆ.
ಧಾರ್ಮಿಕ ಮತಾಂತರ ಮತ್ತು ಮಾನವ ಕಳ್ಳಸಾಗಣೆ ಆರೋಪದ ಮೇಲೆ ಕೇರಳದ ಇಬ್ಬರು ನನ್‌ಗಳಾದ ಪ್ರೀತಿ ಮೇರಿ ಮತ್ತು ವಂದನಾ ಫ್ರಾನ್ಸಿಸ್ ಅವರನ್ನು ಬಂಧಿಸಲಾಗಿದೆ.
ಕಾಂಗ್ರೆಸ್, ಸಿಪಿಎಂ ಹಾಗೂ ಕ್ರೈಸ್ತ ಧರ್ಮ ನಾಯಕರು, ನನ್‌ಗಳ ಬಂಧನ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ‘ನನ್‌ಗಳ ಬಂಧನದಲ್ಲಿ ಬಿಜೆಪಿಯೂ ಭಾಗಿಯಾಗಿದೆ’ ಎಂದು ಆರೋಪಿಸಿ, ಕ್ಯಾಥೋಲಿಕ್ ಚರ್ಚ್ ತನ್ನ ಮುಖವಾಣಿ ‘ದೀಪಿಕಾ’ದಲ್ಲಿ ಪ್ರಕಟಿಸಿತ್ತು.
ಕೇರಳ ಬಿಜೆಪಿ ನಾಯಕ ಹಾಗೂ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಖಾತೆ ಸಚಿವ ಜಾರ್ಜ್ ಕುರಿಯನ್ ಅವರು ಪ್ರಕರಣ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದೂ ಆಕ್ಷೇಪ ವ್ಯಕ್ತವಾಗಿತ್ತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಎಸ್. ಸುರೇಶ್, ‘ನನ್‌ಗಳಿಗೆ ಕಾನೂನುಬದ್ಧವಾಗಿ ಹಾಗೂ ಮಾನಸಿಕವಾಗಿ ಸಹಾಯ ಮಾಡಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಅನೂಪ್ ಆ್ಯಂಟೊನಿ ಜೋಸೆಫ್ ಅವರ ನೇತೃತ್ವದಲ್ಲಿ ಪಕ್ಷದ ನಿಯೋಗವು ಛತ್ತೀಸಗಢಕ್ಕೆ ತೆರಳಲಿದೆ’ ಎಂದು ಹೇಳಿದರು.
‘ಸಿಪಿಎಂ ಮತ್ತು ಕಾಂಗ್ರೆಸ್ ಈ ವಿಷಯದಲ್ಲಿ ಕೋಮು ಭಾವನೆಗಳನ್ನು ಕೆರಳಿಸುವ ಯತ್ನ ಮಾಡುತ್ತಿವೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.