ADVERTISEMENT

ಅಪಹರಿಸಿದ ಯೋಧನ ಚಿತ್ರ ಬಿಡುಗಡೆ: ಸುರಕ್ಷಿತವಾಗಿ‌ ಕರೆತರಲು ಯತ್ನ –ಪೊಲೀಸ್ ಇಲಾಖೆ

ನಕ್ಸಲರಿಂದ ಅಪಹರಣ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 11:32 IST
Last Updated 7 ಏಪ್ರಿಲ್ 2021, 11:32 IST
ರಾಕೇಶ್ವರ ಸಿಂಗ್‌ ಮನ್ಹಾಸ್‌ ಅವರ ಬಿಡುಗಡೆಗೆ ಒತ್ತಾಯಿಸಿ ಜಮ್ಮುದಲ್ಲಿ ಮಾಜಿ ಸೈನಿಕರು ಬುಧವಾರ ಪ್ರತಿಭಟನೆ ನಡೆಸಿದರು   ಪಿಟಿಐ ಚಿತ್ರ
ರಾಕೇಶ್ವರ ಸಿಂಗ್‌ ಮನ್ಹಾಸ್‌ ಅವರ ಬಿಡುಗಡೆಗೆ ಒತ್ತಾಯಿಸಿ ಜಮ್ಮುದಲ್ಲಿ ಮಾಜಿ ಸೈನಿಕರು ಬುಧವಾರ ಪ್ರತಿಭಟನೆ ನಡೆಸಿದರು   ಪಿಟಿಐ ಚಿತ್ರ   

ಬಿಜಾಪುರ: ನಕ್ಸಲರು ಅಪಹರಿಸಿರುವ ಯೋಧ ರಾಕೇಶ್ವರ ಸಿಂಗ್‌ ಮನ್ಹಾಸ್‌ ಅವರ ಭಾವಚಿತ್ರವನ್ನು ಬುಧವಾರ ಬಿಡುಗಡೆ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಕೋಬ್ರಾ ಕಮಾಂಡೊ ಪಡೆಗೆ ಸೇರಿರುವ ರಾಕೇಶ್ವರ್ ಸಿಂಗ್‌ ಅವರನ್ನು ಏಪ್ರಿಲ್‌ 3ರಂದು ಛತ್ತೀಸಗಡದ ಬಸ್ತಾರ್‌ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿ ಸಂದರ್ಭದಲ್ಲಿ ಅಪಹರಿಸಲಾಗಿತ್ತು. ಈ ಗುಂಡಿನ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು.

ಗುಡಿಸಲಲ್ಲಿ ಮನ್ಹಾಸ್‌ ಕುಳಿತಿರುವ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಮನ್ಹಾಸ್‌ ಮಾತ್ರ ಇದ್ದು, ನಕ್ಸಲರು ಯಾರೂ ಕಾಣಿಸಿಕೊಂಡಿಲ್ಲ.

ADVERTISEMENT

‘ಪರಿಸ್ಥಿತಿಯ ಬಗ್ಗೆ ನಿಗಾವಹಿಸಲಾಗಿದೆ. ಯೋಧ ಮನ್ಹಾಸ್‌ ಸುರಕ್ಷಿತವಾಗಿ ಹಿಂತಿರುಗುವಂತೆ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ’ ಎಂದು ಬಸ್ತಾರ್‌ ವಲಯದ ಐಜಿಪಿ ಸುಂದರ್‌ರಾಜ್‌ ತಿಳಿಸಿದ್ದಾರೆ.

‘ಸಂಘಟನೆಯ ಕಾರ್ಯಕರ್ತರು ಮನ್ಹಾಸ್‌ ಅವರನ್ನು ದಾಳಿ ನಡೆಸಿದ ಸ್ಥಳದಿಂದ ಅಪಹರಿಸಿದ್ದಾರೆ. ಸುರಕ್ಷಿತವಾಗಿ ಅವರನ್ನು ಬಿಡುಗಡೆ ಮಾಡಲು ಛತ್ತೀಸಗಡ ಸರ್ಕಾರ ಸಂಧಾನಕಾರರನ್ನು ನೇಮಿಸಬೇಕು’ ಎಂದುನಿಷೇಧಿತ ಸಿಪಿಐ (ಮಾವೋವಾದಿ) ಮಂಗಳವಾರ ಹಿಂದಿಯಲ್ಲಿ ಹೇಳಿಕೆ ಬಿಡುಗಡೆ ಮಾಡಿತ್ತು.

ದಂಡಕಾರಣ್ಯ ವಿಶೇಷ ವಲಯ ಸಮಿತಿ (ಡಿಕೆಎಸ್‌ಝಸಿ) ವಕ್ತಾರ ವಿಕಲ್ಪ ಹೆಸರಿನಲ್ಲಿ ಈ ಹೇಳಿಕೆ ಬಿಡುಗಡೆ ಮಾಡಲಾಗಿತ್ತು.

‘ಸರ್ಕಾರ ಸಂಧಾನಕಾರರನ್ನು ನೇಮಿಸಿದ ಬಳಿಕ ಮನ್ಹಾಸ್‌ ಅವರನ್ನು ಬಿಡುಗಡೆ ಮಾಡಲಾಗುವುದು. ಅಲ್ಲಿಯವರೆಗೂ ಮನ್ಹಾಸ್‌ ಸುರಕ್ಷಿತವಾಗಿರುತ್ತಾರೆ’ ಎಂದು ಹೇಳಿಕೆಯಲ್ಲಿ ತಿಳಿಸಿಲಾಗಿದೆ.

ಮನ್ಹಾಸ್‌ ಪತ್ತೆ ಮಾಡಲು ಪೊಲೀಸರು ಹಲವೆಡೆ ಶೋಧ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹಲವು ಸ್ಥಳೀಯರ ವಿಚಾರಣೆ ನಡೆಸಲಾಗಿದೆ.

ಜಮ್ಮು ವರದಿ: ಯೋಧ ಮನ್ಹಾಸ್‌ ಅವರ ಸಂಬಂಧಿಕರು ಬುಧವಾರ ಜಮ್ಮು–ಪೂಂಚ್‌ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಮನ್ಹಾಸ್‌ ಅವರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ ಸರ್ಕಾರ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.

‘ಮನ್ಹಾಸ್‌ ಸುರಕ್ಷತೆಯ ಬಗ್ಗೆ ಆತಂಕವಾಗಿದೆ. ಸರ್ಕಾರ ಸಂಧಾನಕಾರರನ್ನು ಕಳುಹಿಸಿ ವಾಪಸ್‌ ಕರೆತರಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಮನ್ಹಾಸ್‌ ಅವರ ಪತ್ನಿ ಮೀನು ಒತ್ತಾಯಿಸಿದ್ದಾರೆ.

ಜಮ್ಮುದಲ್ಲೂ ಸಹ ಮನ್ಹಾಸ್‌ ಅವರ ಸಂಬಂಧಿಕರು ಮತ್ತು ಆಪ್ತರು, ಸ್ನೇಹಿತರು ಬೀದಿಗಳನ್ನು ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರು. ‘ನಮ್ಮ ಹೀರೊನನ್ನು ಕರೆತರಬೇಕು. ದ್ರೋಹಿಗಳನ್ನು ಗುಂಡಿಕ್ಕಿ’ ಎಂದು ಘೋಷಣೆಗಳನ್ನು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.