ಸಾಂದರ್ಭಿಕ ಚಿತ್ರ
ಐಸ್ಟೋಕ್ ಚಿತ್ರ
ಡೆಹ್ರಾಡೂನ್: ಮಕ್ಕಳ ಕಳ್ಳಸಾಗಣೆಯಲ್ಲಿ ತೊಡಗಿದ್ದ ಗ್ಯಾಂಗ್ ಅನ್ನು ಉತ್ತರ ಪ್ರದೇಶ ಪೊಲೀಸರು ಬೇಧಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 2ರಂದು ಯಮುನಾ ಕಾಲೋನಿಯ ನಿವಾಸಿ ರೀನಾ ಎಂಬುವರು, ತಮ್ಮ ಇಬ್ಬರು ಮಕ್ಕಳಾದ ಆಕಾಶ್ (5) ಮತ್ತು ವಿಕಾಸ್ (2) ಅಪಹರಣವಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು ಎಂದು ಡೆಹ್ರಾಡೂನ್ ಹಿರಿಯ ಪೊಲೀಸ್ ಅಧೀಕ್ಷಕ ಅಜಯ್ ಸಿಂಗ್ ಹೇಳಿದ್ದಾರೆ.
ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಅಪಹರಣಕಾರರಲ್ಲಿ ಒಬ್ಬರು ಆಕಾಶ್‌ನನ್ನು ಯಮುನಾ ಕಾಲೋನಿಯ ಗೇಟ್ ಬಳಿ ತಂದು ಬಿಟ್ಟು ಹೋಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರೀನಾ ಅವರ ಸೋದರ ಸಂಬಂಧಿ ರಾಕೇಶ್ (52) ಎಂಬುವರು ಅವರ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದು, ಜನವರಿ 2ರ ಸಂಜೆ ಕಾಲೋನಿ ಗೇಟ್ ಬಳಿ ಆಕಾಶ್‌ನನ್ನು ವಾಹನದಿಂದ ಇಳಿಸುವುದನ್ನು ಕೆಲವರು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದರು. ಈ ಕುರಿತು ಪೊಲೀಸರು ತನಿಖೆ ನಡೆಸಿದಾಗ, ರಾಕೇಶ್ ತನ್ನೊಂದಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರಾಹುಲ್ ಮತ್ತು ಅವರ ಮಗಳು ತಾನಿಯಾ ಎಂಬುವವರ ಜೊತೆಗೂಡಿ ಮಕ್ಕಳನ್ನು ಅಪಹರಿಸಿರುವುದು ತಿಳಿದು ಬಂದಿದೆ ಎಂದು ಅಜಯ್ ಹೇಳಿದ್ದಾರೆ.
ದೂರಿನ ಬಗ್ಗೆ ತಿಳಿಯುತ್ತಿದ್ದಂತೆ ಮೂವರು ಆರೋಪಿಗಳು ಪರಾರಿಯಾಗಿದ್ದರು. ರಾಕೇಶ್ ಮತ್ತು ತಾನಿಯಾ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ, ಆದರೆ, ರಾಹುಲ್ ಪರಾರಿಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದು ಮಗು ವಿಕಾಸ್‌ನನ್ನು ಪ್ರಿಯಾಂಕಾ ಮತ್ತು ಸ್ಯಾಂಟಿ ಎಂಬ ಅಣ್ಣ–ತಂಗಿ ಜೋಡಿಗೆ ₹2 ಲಕ್ಷಕ್ಕೆ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಹಿರಂಗಪಡಿಸಿದ್ದಾರೆ. ಬಳಿಕ ಅವರನ್ನೂ ಬಂಧಿಸಲಾಯಿತು. ಮಗುವನ್ನು ರಕ್ಷಿಸಲಾಗಿದೆ ಎಂದು ಅಜಯ್ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.