ADVERTISEMENT

ಕಾನೂನು ಸಂಘರ್ಷ: ನ್ಯಾಯಕ್ಕಾಗಿ ಕಾಯುತ್ತಿರುವ 50 ಸಾವಿರ ಮಕ್ಕಳು

ಪಿಟಿಐ
Published 20 ನವೆಂಬರ್ 2025, 23:35 IST
Last Updated 20 ನವೆಂಬರ್ 2025, 23:35 IST
   

ನವದೆಹಲಿ: ಕಾನೂನು ಸಂಘರ್ಷ ಎದುರಿಸುತ್ತಿರುವ ಮಕ್ಕಳ ಸ್ಥಿತಿಯು ಭಾರತದಲ್ಲಿ ಉತ್ತಮವಾಗಿಲ್ಲ. ನಿಧಾನಗತಿಯ ನ್ಯಾಯದಾನ ವ್ಯವಸ್ಥೆಯ ಕಾರಣ ಮಕ್ಕಳು ಸಂಕಷ್ಟ ಎದುರಿಸುತ್ತಿದ್ದಾರೆ. ಬಾಲ ನ್ಯಾಯಮಂಡಳಿಗಳ  (ಜೆಜೆಬಿ) ಬಳಿ ಸಾವಿರಾರು ಪ್ರಕರಣಗಳು ವಿಚಾರಣೆಯೇ ಇಲ್ಲದೆ ಹಾಗೆಯೇ ಉಳಿದುಬಿಟ್ಟಿವೆ. ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಸಲ್ಲಿಸಿದ ಅರ್ಜಿಗಳಿಗೂ ಉತ್ತರ ನೀಡುತ್ತಿಲ್ಲ. ಇದರಿಂದ ಈ ಮಂಡಳಿಗಳ ಪಾರದರ್ಶಕತೆ ಬಗ್ಗೆಯೂ ಸಂಶಯ ಮೂಡುವಂತಾಗಿದೆ.

ಬಾಲ ನ್ಯಾಯ ಕಾಯ್ದೆ ಜಾರಿಯಾಗಿ 10 ವರ್ಷಗಳ ಕಳೆದರೂ ಕಾನೂನು ಸಂಘರ್ಷ ಎದುರಿಸುತ್ತಿರುವ ಮಕ್ಕಳ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಡಿಯಾ ಜಸ್ಟೀಸ್ ರಿಪೋರ್ಟ್‌ ಸಂಸ್ಥೆಯು ‘ಬಾಲ ನ್ಯಾಯ ಮತ್ತು ಕಾನೂನು ಸಂಘರ್ಷ ಎದುರಿಸುತ್ತಿರುವ ಮಕ್ಕಳು: ಸೌಕರ್ಯಗಳ ಒಂದು ಅಧ್ಯಯನ’ ವರದಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಹಲವು ಅಂಶಗಳ ಬಗ್ಗೆ ಚರ್ಚಿಸಲಾಗಿದೆ.

2022–23ನೇ ಸಾಲಿನ 2023 ಅ.31ರವರೆಗೆ ಮಾಹಿತಿಗಳನ್ನು ಈ ವರದಿಯಲ್ಲಿ ಸಂಗ್ರಹಿಸಲಾಗಿದೆ.

ADVERTISEMENT
  • 50,000+;ನಿಧಾನಗತಿ ನ್ಯಾಯದಾನ ವ್ಯವಸ್ಥೆಯಲ್ಲಿ ಸಿಲುಕಿರುವ ಮಕ್ಕಳ ಸಂಖ್ಯೆ

  • 4ರಲ್ಲಿ ಮೂವರು;16–18 ವರ್ಷದ ಒಳಗಿನ ಮಕ್ಕಳು

ಜೆಜೆಬಿ ಅವ್ಯವಸ್ಥೆ

765 ಜಿಲ್ಲೆಗಳಲ್ಲಿ 707 ಜೆಜೆಬಿಗಳ ಕಾರ್ಯನಿರ್ವಹಿಸುತ್ತಿವೆ. ಪ್ರತಿ ಜಿಲ್ಲೆಯಲ್ಲಿಯೂ ಜೆಜೆಬಿ ಇರಲೇಬೇಕು ಎನ್ನುವುದು ಬಾಲ ನ್ಯಾಯ ಕಾಯ್ದೆಯ ಅನ್ವಯ ಕಡ್ಡಾಯ. ಆದರೆ, ದೇಶದಲ್ಲಿ ಜೆಜೆಬಿಗಳು ವ್ಯವಸ್ಥಿತವಾಗಿಲ್ಲ. ಇಲ್ಲಿ ನ್ಯಾಯಾಧೀಶರು ಇರುವುದಿಲ್ಲ, ದತ್ತಾಂಶಗಳೂ ಇರುವುದಿಲ್ಲ, ಮಕ್ಕಳಿಗೆ ಕಾನೂನು ಸಲಹೆಗಳನ್ನು ನೀಡಲು ಕಾನೂನು ತಜ್ಞರೊಬ್ಬರು ಜೆಜೆಬಿಗಳಲ್ಲಿ ಇರಬೇಕು. ಇದನ್ನು ಕಾನೂನು ಸೇವಾ ಕ್ಲಿನಿಕ್‌ ಎನ್ನಲಾಗುತ್ತದೆ. ಆದರೆ, ಇಲ್ಲಿ ಇವರ ಅಲಭ್ಯತೆಯೂ ಇದೆ.

  • 1 ಲಕ್ಷ; 2022–23ರಲ್ಲಿ ಜೆಜೆಬಿಯಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ

  • 55,816;2022–23ರಲ್ಲಿ ವಿಚಾರಣೆ ನಡೆಸದೇ ಬಾಕಿ ಉಳಿದ ಪ್ರಕರಣಗಳ ಸಂಖ್ಯೆ

  • 4ರಲ್ಲಿ ಒಂದು;ಪೂರ್ಣ ಪ್ರಮಾಣದ ನ್ಯಾಯಪೀಠ ಇಲ್ಲದೆಯೇ ಕಾರ್ಯನಿರ್ವಹಿಸುತ್ತಿರುವ ಜೆಜೆಬಿಗಳ ಸಂಖ್ಯೆ

  • ಒಡಿಶಾದಲ್ಲಿ ಶೇ 83ರಷ್ಟು ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಕರ್ನಾಟಕದಲ್ಲಿ ಶೇ 35ರಷ್ಟು ಪ್ರಕರಣಗಳು ಬಾಕಿ ಇವೆ

ಆರ್‌ಟಿಐಗೂ ಸಿಗದ ಉತ್ತರ
ಜೆಜೆಬಿಗಳ ಸ್ಥಿತಿಗತಿಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ದತ್ತಾಂಶಗಳನ್ನು ದಾಖಲು ಮಾಡಲಾಗುತ್ತಿಲ್ಲ. ಆದ್ದರಿಂದ, ಇಂಡಿಯಾ ಜಸ್ಟೀಸ್ ರಿಪೋರ್ಟ್‌ ಸಂಸ್ಥೆಯು ಈ ಕುರಿತು ಮಾಹಿತಿ ಕೋರಿ ಒಟ್ಟು 250 ಅರ್ಜಿ ಸಲ್ಲಿಸಿತ್ತು. ಇವುಗಳಲ್ಲಿ ಶೇ 11ರಷ್ಟು ಅರ್ಜಿಗಳನ್ನು ತಿರಸ್ಕರಿಸಲಾಯಿತು. ಶೇ 24ರಷ್ಟು ಅರ್ಜಿಗಳಿಗೆ ಉತ್ತರವೇ ಬರಲಿಲ್ಲ. ಶೇ 29ರಷ್ಟು ಅರ್ಜಿಗಳನ್ನು ಬೇರೆ ಜೆಜೆಬಿಗಳಿಗೂ ವರ್ಗಾಯಿಸಲಾಯಿತು. ಕೇವಲ ಶೇ39ರಷ್ಟು ಅರ್ಜಿಗಳಿಗೆ ಉತ್ತರ ದೊರೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.