ADVERTISEMENT

ಕೋವಿಡ್‌ನಿಂದ 3,621 ಮಕ್ಕಳು ಅನಾಥ: ‘ಸುಪ್ರೀಂ’ಗೆ ಎನ್‌ಸಿಪಿಸಿಆರ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 14:36 IST
Last Updated 7 ಜೂನ್ 2021, 14:36 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ಕೋವಿಡ್–19 ಸಾಂಕ್ರಾಮಿಕ ರೋಗದಿಂದಾಗಿ 3,621 ಮಕ್ಕಳು ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇದರಲ್ಲಿ 274 ಪರಿತ್ಯಕ್ತ ಮಕ್ಕಳೂ ಇದ್ದಾರೆ’ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ (ಎನ್‌ಸಿಪಿಸಿಆರ್) ತಿಳಿಸಿದೆ.

‘2020ರ ಏಪ್ರಿಲ್ 1ರಿಂದ 2021ರ ಜೂನ್ 5ರ ತನಕ ದೇಶದಾದ್ಯಂತ ಒಟ್ಟು 26,176 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಒಟ್ಟಾರೆ 30,071 ಮಕ್ಕಳು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ಇದನ್ನು ‘ಬಾಲ್ ಸ್ವರಾಜ್’ ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆ ಎಂದು ಎನ್‌ಸಿಪಿಸಿಆರ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

2020ರ ಏ. 1ರಿಂದ 2021ರ ಜೂನ್ 5 ರ ತನಕ ತಂದೆ–ತಾಯಿ ಅಥವಾ ಇಬ್ಬರಲ್ಲಿ ಒಬ್ಬರನ್ನು ಕಳೆದುಕೊಂಡ ಮಕ್ಕಳ ಮಾಹಿತಿಯನ್ನೂ ಪೋರ್ಟ್‌ಲ್‌ನಲ್ಲಿ ಅಪ್‌ಡೇಟ್ ಮಾಡಲಾಗಿದೆ ಎಂದೂ ಆಯೋಗ ಮಾಹಿತಿ ನೀಡಿದೆ.

ADVERTISEMENT

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 7,084 ಪ್ರಕರಣಗಳಿದ್ದರೆ, ಉತ್ತರ ಪ್ರದೇಶದಲ್ಲಿ 3,172, ರಾಜಸ್ಥಾನದಲ್ಲಿ 2,482 ಪ್ರಕರಣಗಳಿವೆ. ಈ ಮಕ್ಕಳಲ್ಲಿ ಕೆಲವರು ಕೋವಿಡ್‌ನಿಂದಾಗಿ ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದರೆ, ಕೆಲ ಮಕ್ಕಳು ಏಕ ಪೋಷಕರನ್ನೂ ಕಳೆದುಕೊಂಡವರಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 99 ಮಕ್ಕಳು ಅನಾಥರಾಗಿದ್ದು, ಇದರಲ್ಲಿ 6 ಮಕ್ಕಳು ಪರಿತ್ಯಕ್ತರಾಗಿದ್ದಾರೆ. 555 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡವರಾಗಿದ್ದಾರೆ.

ಸುಪ್ರೀಂ ಕೋರ್ಟ್ ಕೋರಿದ ಮಾಹಿತಿಗೆ ಪ್ರತಿಕ್ರಿಯೆ ನೀಡಿರುವ ಎನ್‌ಸಿಪಿಸಿಆರ್, ಬಾಲಾಪರಾಧಿ ಕಾಯ್ದೆ–2015ರ ಪ್ರಕಾರ ಕಡ್ಡಾಯವಾದ ಕಾರ್ಯವಿಧಾನವನ್ನು ಅನುಸರಿಸದೇ ಕೆಲ ಸ್ವಯಂ ಸೇವಾ ಸಂಸ್ಥೆಗಳು ಮತ್ತು ವ್ಯಕ್ತಿಗಳು ಅಂಥ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಿ ದತ್ತು ಪ್ರಕ್ರಿಯೆಗೆ ಮುಂದಾಗಿದ್ದಾರೆ. ಕೆಲವರು ಈ ಮಕ್ಕಳ ಹೆಸರಿನಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದೂ ಆಯೋಗವು ಕಳವಳ ವ್ಯಕ್ತಪಡಿಸಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.