ADVERTISEMENT

ಅಂಗವಿಕಲ ಮಕ್ಕಳಿಗೆ ಹತ್ತಿರವಾಗದ ಆನ್‍ಲೈನ್‍ ಶಿಕ್ಷಣ

ಸ್ವಾಭಿಮಾನ್ ಸೇವಾಸಂಸ್ಥೆಯಿಂದ ಸಮೀಕ್ಷೆ, ಕಲಿಕೆ ಕೈಬಿಡುವ ಚಿಂತನೆಯಲ್ಲಿ ಶೇ 43.52ರಷ್ಟು ಮಕ್ಕಳು

ಪಿಟಿಐ
Published 18 ಜುಲೈ 2020, 11:17 IST
Last Updated 18 ಜುಲೈ 2020, 11:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಂಗವಿಕಲತೆಯಿಂದ ಬಳಲುತ್ತಿರುವ ಶೇ 43.52ರಷ್ಟು ಮಕ್ಕಳು ಆನ್‍ಲೈನ್‍ ಶಿಕ್ಷಣದಲ್ಲಿ ತಮಗೆ ಎದುರಾಗುತ್ತಿರುವ ತೊಡಕುಗಳಿಂದಾಗಿ ಕಲಿಕೆಯಿಂದಲೇ ಹಿಂದೆ ಸರಿಯುವ ಚಿಂತನೆಯಲ್ಲಿ ಇದ್ದಾರೆ. ಸಮೀಕ್ಷೆಯೊಂದರಲ್ಲಿ ಈ ಸಂಗತಿ ಕಂಡುಬಂದಿದ್ದು, ಒಟ್ಟು 3,627 ಮಂದಿ ಪ್ರತಿಕ್ರಿಯೆ ನೀಡಿದ್ದರು.

ಅಂಗವಿಕಲ ಮಕ್ಕಳ ಏಳಿಗೆಗೆ ಕಾರ್ಯನಿರ್ವಹಿಸುತ್ತಿರುವ ಸಮುದಾಯದ ಆಧರಿತ ಸೇವಾ ಸಂಸ್ಥೆ ಸ್ವಾಭಿಮಾನ್‍ಸಮೀಕ್ಷೆ ನಡೆಸಿತ್ತು. ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್, ತ್ರಿಪುರಾ, ಚೆನ್ನೈ, ಸಿಕ್ಕಿಂ, ನಾಗಾಲ್ಯಾಂಡ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ ಮೇ ತಿಂಗಳಲ್ಲಿ ಸಮೀಕ್ಷೆಯು ನಡೆದಿತ್ತು.

ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಪ್ರತಿಕ್ರಿಯಿಸಿದ್ದರು. ಸಮೀಕ್ಷೆ ಪ್ರಕಾರ, ಅಂಗವಿಕಲತೆಯುಳ್ಳ ಶೇ 56.5ರಷ್ಟು ಮಕ್ಕಳು ಕಷ್ಟಪಟ್ಟು ತರಗತಿಗೆ ಹಾಜರಾಗುತ್ತಾರೆ. ಆದರೆ, ನಿಯಮಿತ ಹಾಜರಿ ಇರುವುದಿಲ್ಲ. ಸೌಲಭ್ಯಗಳ ಕೊರತೆಯಿಂದ ಶೇ 77ರಷ್ಟು ಮಕ್ಕಳಿಗೆ ದೂರ ಶಿಕ್ಷಣ ದಕ್ಕುತ್ತಿಲ್ಲ.

ADVERTISEMENT

ಶೇ 56.48ರಷ್ಟು ಮಕ್ಕಳು ಕಲಿಕೆ ಮುಂದುವರಿಸಿದ್ದಾರೆ. ಶೇ 44ರಷ್ಟು ಮಕ್ಕಳು ವೆಬಿನಾರ್ ಆಧರಿತ ಬೋಧನೆಯಲ್ಲಿ ಸಂಜ್ಞಾ ಭಾಷೆ ಬಳಕೆ ಆಗುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ಶೇ 86ರಷ್ಟು ಪೋಷಕರು, ತಂತ್ರಜ್ಞಾನ ಬಳಕೆ ಬಗ್ಗೆಯೇ ನಮಗೆ ಅರಿವಿಲ್ಲ ಎಂದಿದ್ದರೆ, ಶೇ 81ರಷ್ಟು ಶಿಕ್ಷಕರು ತಮ್ಮಲ್ಲಿ ಶೈಕ್ಷಣಿಕ ಪರಿಕರಗಳು ಲಭ್ಯವಿಲ್ಲ ಎಂದು ದೂರಿದ್ದಾರೆ.

ಸಮೀಕ್ಷೆಗೆ ಪ್ರತಿಕ್ರಿಯಿಸಿದ ಶಿಕ್ಷಕರ ಪ್ರಕಾರ, ಶೇ 64ರಷ್ಟು ಮಕ್ಕಳ ಮನೆಗಳಲ್ಲಿ ಸ್ಮಾರ್ಟ್ ಫೋನ್‍ ಅಥವಾ ಕಂಪ್ಯೂಟರ್ ಇಲ್ಲ. ಶೇ 67ರಷ್ಟು ಮಕ್ಕಳು ಆನ್‍ಲೈನ್ ಶಿಕ್ಷಣಕ್ಕೆ ಪೂರಕವಾಗಿ ನಮಗೆ ಟ್ಯಾಬ್, ಕಂಪ್ಯೂಟರ್ ಅಥವಾ ಪೂರಕ ಪರಿಕರಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಉಳಿದಂತೆ, ಶೆ 74ರಷ್ಟು ಮಕ್ಕಳು ನಮಗೆ ಡಾಟಾ, ವೈ-ಫೈ ಸೇವೆ ಅಗತ್ಯವಿದೆ ಎಂದಿದ್ದರೆ, ಶೇ 61ರಷ್ಟು ಮಕ್ಕಳು ಬರವಣಿಗೆ, ಮಾರ್ಗದರ್ಶನ, ಓದುವಿಕೆಗೆ ಸಹಾಯಕರ ಅಗತ್ಯವಿದೆ ಎಂದು ಹೇಳಿದ್ದಾರೆ.

ಸಮೀಕ್ಷೆಯ ಅಂಶಗಳನ್ನು ಆಧರಿಸಿ ವಿವರವಾದ ಶಿಫಾರಸುಗಳನ್ನು ಸಲ್ಲಿಸಲಾಗಿದ್ದು, ಕೋವಿಡ್-19 ಸಂದರ್ಭದಲ್ಲಿ ಕಲಿಕೆಗೆ ಅನುಕೂಲವಾಗುವಂತೆ ನೀತಿ ರೂಪಿಸಲು ಕೋರಲಾಗಿದೆ. ಇಂಥ ಮಕ್ಕಳಿಗೆ ಭಿನ್ನಪಠ್ಯಕ್ರಮ ರೂಪಿರುವುದು, ಯಾವುದೇ ವೇಳೆ ತರಗತಿ ಆರಂಭಿಸಲು ಅನುಕೂಲ ಕಲ್ಪಿಸುವುದು ಅಗತ್ಯ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.