ADVERTISEMENT

ಮುಂಬೈ ದಾಳಿ ಸಂಚುಕೋರ ಹಫೀಜ್ ಮಗನನ್ನು ಕಪ್ಪು ಪಟ್ಟಿಗೆ ಸೇರಿಸಲು ಚೀನಾ ಅಡ್ಡಿ

ಪಿಟಿಐ
Published 20 ಅಕ್ಟೋಬರ್ 2022, 5:00 IST
Last Updated 20 ಅಕ್ಟೋಬರ್ 2022, 5:00 IST
   

ವಿಶ್ವಸಂಸ್ಥೆ: ಮುಂಬೈ ದಾಳಿಯ ಸಂಚುಕೋರ, ಪಾಕಿಸ್ತಾನ ಮೂಲದ ಭಯೋತ್ಪಾದಕ ಹಫೀಜ್ ಸಯೀದ್ ಮಗ ಹಫೀಜ್ ತಲ್ಹಾ ಸಯೀದ್‌ನನ್ನು ಕಪ್ಪು ಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಅಮೆರಿಕ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಚೀನಾ ತಡೆಹಿಡಿದಿದೆ.

48 ಗಂಟೆಗಳ ಅವಧಿಯೊಳಗೆ, ಭಯೋತ್ಪಾದಕರನ್ನು ಕಪ್ಪು ಪಟ್ಟಿಗೆ ಸೇರಿಸುವ ಭಾರತ ಮತ್ತು ಅಮೆರಿಕದ ಎರಡನೇ ಪ್ರಸ್ತಾವನೆಗೆ ಚೀನಾ ಅಡ್ಡಗಾಲು ಹಾಕಿದೆ.

46 ವರ್ಷದ ಹಫೀಜ್ ತಲ್ಹಾ ಸಯೀದ್, ಲಷ್ಕರ್ ಇ ತಯಬಾದ ಪ್ರಮುಖ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದಾನೆ.

ADVERTISEMENT

ಈ ವರ್ಷದ ಏಪ್ರಿಲ್‌ನಲ್ಲಿ ಈತನನ್ನು ಭಯೋತ್ಪಾದಕ ಎಂದು ಭಾರತ ಸರ್ಕಾರ ಘೋಷಿಸಿತ್ತು.

ಹಫೀಜ್ ತಲ್ಹಾ ಸಯ್ಯಿದ್, ಭಾರತದಲ್ಲಿ ಲಷ್ಕರ್-ಎ-ತಯಬಾ (ಎಲ್‌ಇಟಿ) ಮತ್ತು ಅಫ್ಗಾನಿಸ್ತಾನದಲ್ಲಿ ಎಲ್‌ಇಟಿಗೆ ನೇಮಕಾತಿ, ನಿಧಿ ಸಂಗ್ರಹ, ಯೋಜನೆ ಮತ್ತು ದಾಳಿಗಳನ್ನು ಕಾರ್ಯಗತಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ ಎಂದು ಭಾರತದ ಗೃಹ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈತ ಪಾಕಿಸ್ತಾನದ ವಿವಿಧ ಎಲ್‌ಇಟಿ ಕೇಂದ್ರಗಳಿಗೆ ಸಕ್ರಿಯವಾಗಿ ಭೇಟಿ ನೀಡಿದ್ದಾನೆ. ಭಾರತ, ಇಸ್ರೇಲ್, ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಜಿಹಾದ್‌ಗಾಗಿ ಪ್ರಚಾರ ಮಾಡಿದ್ದಾನೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.