ADVERTISEMENT

ನಾಪತ್ತೆಯಾಗಿದ್ದ ಐವರನ್ನು ಭಾರತಕ್ಕೆ ಹಸ್ತಾಂತರಿಸಿದ ಚೀನಾ ಸೇನಾ

ಪಿಟಿಐ
Published 12 ಸೆಪ್ಟೆಂಬರ್ 2020, 9:33 IST
Last Updated 12 ಸೆಪ್ಟೆಂಬರ್ 2020, 9:33 IST
ನಾಪತ್ತೆಯಾಗಿದ್ದ ಐವರು ಭಾರತೀಯರು(ಚಿತ್ರ : ರಕ್ಷಣಾ ಇಲಾಖೆ ಟ್ವಿಟರ್)
ನಾಪತ್ತೆಯಾಗಿದ್ದ ಐವರು ಭಾರತೀಯರು(ಚಿತ್ರ : ರಕ್ಷಣಾ ಇಲಾಖೆ ಟ್ವಿಟರ್)   

ಇಟಾನಗರ: ಅರುಣಾಚಲಪ್ರದೇಶದ ಅಪ್ಪರ್‌ ಸುಬನ್‌ಸಿರಿ ಜಿಲ್ಲೆಯಲ್ಲಿ ಮೆಕ್‌ಮೋಹನ್‌ ಗಡಿರೇಖೆ ಬಳಿ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯಿಂದ (ಪಿಎಲ್‌ಎ) ಅಪಹರಣಕ್ಕೊಳಗಾಗಿದ್ದರು ಎನ್ನಲಾದ ಐವರು ಯುವಕರನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.

ಇಟಾನಗರದಿಂದ 1,000 ಕಿ.ಮೀ. ದೂರದಲ್ಲಿರುವ ಅಂಜಾವ್‌ ಜಿಲ್ಲೆಯಲ್ಲಿ ಯುವಕರನ್ನು ಪಿಎಲ್‌ಎ ಸೇನೆಗೆ ಹಸ್ತಾಂತರಿಸಿತು ಎಂದು ಭಾರತೀಯ ಸೇನೆಯ ತೇಜ್‌ಪುರ ರಕ್ಷಣಾ ನೆಲೆಯ ವಕ್ತಾರ ಲೆ.ಜ.ಹರ್ಷವರ್ಧನ್‌ ಪಾಂಡೆ ತಿಳಿಸಿದ್ದಾರೆ.

‘ಕೋವಿಡ್‌–19ಗೆ ಸಂಬಂಧಿಸಿದ ಶಿಷ್ಟಾಚಾರದ ಪ್ರಕಾರ ಐವರನ್ನು 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ನಂತರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು’ ಎಂದೂ ಅವರು ಹೇಳಿದ್ದಾರೆ.

ADVERTISEMENT

ಅರುಣಾಚಲ ಪ್ರದೇಶದ ಸುಬನ್‌ಸಿರಿ ಜಿಲ್ಲೆಯ ಈ ಯುವಕರು ಸೆ. 1 ರಂದು ಬೇಟೆಯಾಡುವುದಕ್ಕಾಗಿ ಕಾಡಿಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದರು ಎಂದು ಭಾರತೀಯ ಸೇನೆ ತಿಳಿಸಿತ್ತು. ಇದೇ ವೇಳೆ ಯುವಕರನ್ನು ಚೀನಾದ ಪಿಎಲ್‌ಎ ಅಪಹರಿಸಿದೆ ಎಂದೂ ಸುದ್ದಿಯಾಗಿತ್ತು. ಯುವಕರು ನಾಪತ್ತೆಯಾಗಿದ್ದ ವಿಷಯವನ್ನು ಭಾರತೀಯ ಸೇನೆಯು ಪಿಎಲ್‌ಎ ಗಮನಕ್ಕೆ ತಂದಿತ್ತು.

ಯುವಕರನ್ನು ಪತ್ತೆ ಮಾಡಿದ ಚೀನಾ, ಅವರು ತಮ್ಮಲ್ಲಿ ಇರುವುದನ್ನು ದೃಢಪಡಿಸಿತ್ತು.ಕೇಂದ್ರ ಸಚಿವ ಕಿರೆಣ್ ರಿಜಿಜು ಅವರು, ‘ನಾಪತ್ತೆಯಾಗಿದ್ದ ಐವರು ಪತ್ತೆಯಾಗಿದ್ದು, ಚೀನಾ ಪಡೆಗಳು ಅವರನ್ನು ಯಾವಾಗ ಬೇಕಾದರೂ ಭಾರತಕ್ಕೆ ಹಸ್ತಾಂತರಿಸಬಹುದು’ ಎಂದು ಶುಕ್ರವಾರ ಟ್ವೀಟ್ ಮೂಲಕ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.