
ಇಟಾನಗರ: ಚೀನಾದ ಶಾಂಘೈ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು, ಭಾರತದ ಪಾಸ್‌ಪೋರ್ಟ್ ಅನ್ನು ಪರಿಗಣಿಸಲು ನಿರಾಕರಿಸಿ 18 ತಾಸು ವಶಕ್ಕೆ ಪಡೆದಿದ್ದರು ಎಂದು ಬ್ರಿಟನ್‌ನಲ್ಲಿ ನೆಲಸಿರುವ ಅರುಣಾಚಲ ಪ್ರದೇಶದ ಮಹಿಳೆ ಆರೋಪಿಸಿದ್ದಾರೆ.
ಪ್ರೇಮಾ ವಾಂಗ್‌ಜೊಮ್ ತೊಂಗ್‌ಡಾಕ್ ಅವರು ನವೆಂಬರ್ 21ರಂದು ಲಂಡನ್‌ನಿಂದ ಜಪಾನ್‌ಗೆ ಪ್ರಯಾಣಿಸುತ್ತಿದ್ದರು. ವಿಮಾನ ಬದಲಾವಣೆಗಾಗಿ ಶಾಂಘೈ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾಗ ವಲಸೆ ಅಧಿಕಾರಿಗಳು, ಪ್ರೇಮಾ ಅವರ ಪಾಸ್‌ಪೋರ್ಟ್ ಪರಿಶೀಲಿಸಿ, ‘ಜನ್ಮಸ್ಥಳವನ್ನು ಅರುಣಾಚಲ ಪ್ರದೇಶ ಎಂದು ದಾಖಲಿಸಲಾಗಿದೆ. ಹೀಗಾಗಿ ಇದನ್ನು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಘೋಷಿಸಿದ್ದರು ಎಂದು ದೂರಿದ್ದಾರೆ.
‘ಅರುಣಾಚಲ ಪ್ರದೇಶ ಚೀನಾದ ಭಾಗ ಎಂದು ಒತ್ತಿ ಹೇಳಿದ ಅಧಿಕಾರಿಗಳು, ಅದನ್ನೇ ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ಯಾವುದೇ ವಿವರಣೆ ನೀಡದೆ 18 ತಾಸು ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ ಊಟ ಮತ್ತು ಅಗತ್ಯ ಸೌಲಭ್ಯ ಒದಗಿಸಿದ್ದರು’ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.
‘ಸ್ನೇಹಿತರ ಮುಖಾಂತರ ಶಾಂಘೈನಲ್ಲಿರುವ ಭಾರತದ ಕಾನ್ಸುಲೇಟ್ ಕಚೇರಿಯನ್ನು ಸಂಪರ್ಕಿಸಿದೆ. ಬಳಿಕ ಕಾನ್ಸುಲೇಟ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಜಪಾನ್‌ಗೆ ತೆರಳಲು ವಿಮಾನ ಹತ್ತಲು ನೆರವಾದರು’ ಎಂದು ಅವರು ತಿಳಿಸಿದ್ದಾರೆ.
ಪ್ರೇಮಾ ಅವರು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದು ಭಾರತದ ಸಾರ್ವಭೌಮತ್ವ ಮತ್ತು ಅರುಣಾಚಲ ಪ್ರದೇಶದ ಜನರಿಗೆ ಮಾಡಿದ ಅಪಮಾನ ಎಂದು ಅವರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.