ನವದೆಹಲಿ: ಪತ್ರಕರ್ತರೊಬ್ಬರು ಶಾಮೀಲಾಗಿರುವ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಚೀನಾ ಮತ್ತು ಓರ್ವ ನೇಪಾಳಿ ನಾಗರಿಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸೆ.14ರಂದು ಫ್ರೀಲಾನ್ಸ್ ಪತ್ರಕರ್ತ ರಾಜೀವ್ ಶರ್ಮಾ ಅವರನ್ನು ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕವು ಬಂಧಿಸಿತ್ತು. ರಾಜೀವ್ ಶರ್ಮಾ ಬಂಧನದ ಬೆನ್ನಿಗೇ ಚೀನಾ ಮೂಲದ ಮಹಿಳೆ ಮತ್ತು ನೇಪಾಳದ ನಾಗರಿಕನನ್ನು ಬಂಧಿಸಲಾಗಿತ್ತು.
ನಕಲಿ ಕಂಪನಿಗಳ ಅಕೌಂಟ್‌ನಿಂದ ಈ ಪತ್ರಕರ್ತನಿಗೆ ಚೀನಾ ಮತ್ತು ನೇಪಾಳದ ಬಂಧಿತ ನಾಗರಿಕರು ದೊಡ್ಡಮೊತ್ತದ ಹಣ ಪಾವತಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಇತರ ಸೂಕ್ಷ್ಮ ದಾಖಲೆಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ದಿ ಟ್ರಿಬ್ಯೂನ್, ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ, ಫ್ರೀ ಪ್ರೆಸ್ ಜರ್ನಲ್, ಸಕಾಳ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಿದ್ದ ಶರ್ಮಾ ಅವರ ಮೇಲೆ ಇಸ್ರೇಲ್‌ನ ವಿವಾದಿತ ಸ್ಪೈವೇರ್ ಪೆಗಾಸಸ್ ಬಳಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಈ ಹಿಂದೆ ಸುದ್ದಿಯಾಗಿತ್ತು.
ನವದೆಹಲಿಯ ಪಿತಾಂಪುರ ಪ್ರದೇಶದ ನಿವಾಸಿ ಶರ್ಮಾ, ಕಳೆದ ಎರಡು ದಶಕಗಳಿಂದ ವಿದೇಶಾಂಗ ವ್ಯವಹಾರಗಳ ಬಗ್ಗೆ ವರದಿ ಮಾಡುತ್ತಿದ್ದರು. ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕ್ರೋಢೀಕೃತ (ಕ್ಲಾಸಿಫೈಡ್) ಮಾಹಿತಿಯನ್ನು ಅವರು ಹೊಂದಿದ್ದರು ಎಂದು ದೆಹಲಿ ಪೊಲೀಸ್ ವಕ್ತಾರರು ಶುಕ್ರವಾರ ರಾತ್ರಿ ಹೇಳಿದರು.
ಬಂಧನ ಕುರಿತು ಹೆಚ್ಚಿನ ಮಾಹಿತಿ ನೀಡಲು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. 'ಸೂಕ್ತಕಾಲದಲ್ಲಿ ಎಲ್ಲ ಮಾಹಿತಿ ಹಂಚಿಕೊಳ್ಳಲಾಗುವುದು' ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.