ADVERTISEMENT

ಅನುಮತಿ ಇಲ್ಲದೇ ನುಸುಳಿದ್ದ ಚೀನಾ ಹಡಗನ್ನು ಹೊರಗಟ್ಟಿದ ಭಾರತೀಯ ನೌಕಾಪಡೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 12:10 IST
Last Updated 3 ಡಿಸೆಂಬರ್ 2019, 12:10 IST
   

ನವದೆಹಲಿ: ಇತ್ತೀಚೆಗೆ ಅಂಡಮಾನ್‌–ನಿಕೋಬಾರ್‌ ದ್ವೀಪಗಳ ಸಮೀಪ ಚೀನಾ ಮೂಲದ ಸಂಶೋಧನಾ ಹಡಗು ಅನುಮತಿ ಇಲ್ಲದೇ ಒಳ ನುಸುಳಿದ್ದು, ಅದನ್ನು ನಾವು ಹೊರಗಟ್ಟಿದ್ದೇವೆ ಎಂದು ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಮ್‌ಬೀರ್‌ ಸಿಂಗ್‌ ಹೇಳಿದ್ದಾರೆ.

‘ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ನೀವು ಏನೇ ಮಾಡಬೇಕೆಂದರೂ ನಮಗೆ ತಿಳಿಸಬೇಕು ಮತ್ತು ನಮ್ಮಿಂದ ಅನುಮತಿ ಪಡೆಯಬೇಕೆಂಬುದು ನಮ್ಮ ದೃಢ ನಿಲುವಾಗಿದೆ,’ ಎಂದು ಕರಮ್‌ಬೀರ್‌ ಸಿಂಗ್‌ ಹೇಳಿದ್ದಾರೆ. ಡಿಸೆಂಬರ್‌ 4 ರ ನೌಕಾಪಡೆ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

‌ಸಮುದ್ರ ವಲಯದ ಕಾನೂನಿಗೆ ಸಂಬಂಧ ಪಟ್ಟಂತೆ ವಿಶ್ವಸಂಸ್ಥೆ ಹೇಳುವ ಪ್ರಕಾರ, ರಾಷ್ಟ್ರವೊಂದು ತನ್ನ ಕರಾವಳಿಯಿಂದ 200 ನಾಟಿಕಲ್‌ (ಸಮುದ್ರ ಜಲದಲ್ಲಿ ದೂರ ಅಳೆಯುವ ಮೌಲ್ಯಮಾಪನ) ಮೈಲಿ ದೂರದವರೆಗೂ ವಿಶೇಷ ಆರ್ಥಿಕ ವಲಯ ಹೊಂದಿರುತ್ತದೆ. ಅಷ್ಟು ದೂರದವರೆಗೂ ರಾಷ್ಟ್ರವೊಂದು ತನ್ನ ಜಲ ಸಂಪನ್ಮೂಲಗಳ ಅನ್ವೇಷಣೆ, ಬಳಕೆ, ಸಂರಕ್ಷಣೆ ಮತ್ತು ನಿರ್ವಹಣೆ ಮಾಡಬಹುದು.

ADVERTISEMENT

ಚೀನಾದ ಶಿ–ಯಾನ್‌ 1 ಎಂಬ ಹಡಗು ನಮ್ಮ ವಿಶೇಷ ಆರ್ಥಿಕ ವಲಯದಲ್ಲಿ ಸೆಪ್ಟೆಂಬರ್‌ನಲ್ಲಿ ಪೊರ್ಟ್ ಬ್ಲೇರ್‌ ಬಳಿ ಕಾಣಿಸಿಕೊಂಡಿದ್ದು, ಹಲವು ಚಟುವಟಿಕೆಗಳಲ್ಲಿ ತೊಡಗಿತ್ತು. ಇದನ್ನು ಪತ್ತೆ ಹಚ್ಚಿದ್ದಭಾರತೀಯ ನೌಕಾಪಡೆ ಚೀನಾದ ಹಡಗನ್ನು ಹೊರಗಟ್ಟುವಲ್ಲಿ ಸಫಲವಾಗಿದೆ.

ಚೀನಾ ಮೂಲದ ಹಡಗುಗಳ ಬಗ್ಗೆ ಭಾರತೀಯ ನೌಕಾಪಡೆ ತೀವ್ರ ನಿಗಾವಹಿಸಿದೆ ಎಂದಿರುವ ಕರಮ್‌ಬೀರ್‌ ಸಿಂಗ್‌, ‘ಸಮುದ್ರದ ಆಳದಲ್ಲಿ ಗಣಿಗಾರಿಕೆ ನಡೆಸಲು ಚೀನಾದವರಿಗೆ ಅವರದ್ದೇ ಆದ ಜಾಗವಿದೆ. ಸಾಗರ ಸಂಪನ್ಮೂಲಗಳ ಸಂಶೋಧನೆಯಲ್ಲಿ ತೊಡಗಿರುವ ಚೀನಾದ ಹಡಗುಗಳು ಹಿಂದು ಮಹಾಸಾಗರದಲ್ಲಿ ಇವೆ. ಯಾವುದೇ ಸಮಯದಲ್ಲಿ ಏಳರಿಂದು ಎಂಟು ಚೀನಾ ಹಡಗುಗಳು ಹಿಂದು ಮಹಾಸಾಗರದ (ಚೀನಾ) ವಲಯದಲ್ಲಿ ಕಾರ್ಯಾಚರಣೆ ಮಾಡುತ್ತವೆ. ಅವುಗಳಲ್ಲಿನ ಒಂದು ಹಡಗು ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಕಾಣಿಸಿಕೊಂಡಿತ್ತು,‘ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.