ADVERTISEMENT

ಕುಟುಂಬ ಒಡೆದು ಗುರಿ ಸಾಧಿಸಿದರು: ಪಾರಸ್‌ ವಿರುದ್ಧ ಚಿರಾಗ್ ಪಾಸ್ವಾನ್ ಟೀಕೆ

ಪಿಟಿಐ
Published 10 ಜುಲೈ 2021, 14:23 IST
Last Updated 10 ಜುಲೈ 2021, 14:23 IST
ಚಿರಾಗ್ ಪಾಸ್ವಾನ್ (ಪಿಟಿಐ ಚಿತ್ರ)
ಚಿರಾಗ್ ಪಾಸ್ವಾನ್ (ಪಿಟಿಐ ಚಿತ್ರ)   

ಪಟ್ನಾ: ತಮ್ಮದೇ ಕುಟುಂಬ ಒಡೆಯುವ ಮೂಲಕ ಗುರಿ ಸಾಧಿಸಿದ್ದಾರೆ ಎಂದು ಚಿಕ್ಕಪ್ಪ ಪಶುಪತಿ ಕುಮಾರ್‌ ಪಾರಸ್‌ ಅವರನ್ನು ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಟೀಕಿಸಿದ್ದಾರೆ.

ಪಾರಸ್‌ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್‌ ದರ್ಜೆಯ ಸ್ಥಾನ ದೊರೆತಿದೆ. ಈ ಕುರಿತು ಚಿರಾಗ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ನನ್ನ ತಂದೆ ರಾಮ್‌ವಿಲಾಸ್ ಪಾಸ್ವಾನ್ ಅವರು ಬೆವರು ಸುರಿಸಿ ಕಟ್ಟಿರುವ ಪಕ್ಷವನ್ನು ಮರಳಿ ಪಡೆಯುವ ಹೋರಾಟವನ್ನು ಬಿಟ್ಟುಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಲೋಕಸಭೆಯಲ್ಲಿ ಎಲ್‌ಜೆಪಿ ನಾಯಕನಾಗಿ ಪಾರಸ್ ಆಯ್ಕೆ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಚಿರಾಗ್‌ಗೆ ಹಿನ್ನಡೆಯಾಗಿತ್ತು.

ತಂದೆಯ ಜನ್ಮ ದಿನಾಚರಣೆಯಂದು ಒಂದು ಟ್ವೀಟ್ ಸಹ ಮಾಡದ, ವೈಯಕ್ತಿಕ ಮಹತ್ವಾಕಾಂಕ್ಷೆಗಾಗಿ ಹಪಹಪಿಸುವ ವ್ಯಕ್ತಿ ಪಕ್ಷವನ್ನು ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉದ್ದೇಶಿಸಿ ಚಿರಾಗ್ ಹೇಳಿದ್ದಾರೆ. ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಗೆ ನಿತೀಶ್ ಅವರ ಸಂಚು ಕಾರಣ ಎಂದು ಈ ಹಿಂದೆಯೂ ಚಿರಾಗ್ ಆರೋಪಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅಪಾರ ಗೌರವ ಇಟ್ಟಿರುವ ಹೊರತಾಗಿಯೂ ಪಕ್ಷದ ಬಿಕ್ಕಟ್ಟಿನ ಸಂದರ್ಭದಲ್ಲಿ ಮೌನವಹಿಸಿರುವ ಬಿಜೆಪಿ ಬಗ್ಗೆ ಭ್ರಮನಿರಸನವಾಗಿದೆ ಎಂದೂ ಅವರು ಹೇಳಿದ್ದಾರೆ.

ಭಗವಾನ್ ರಾಮನಿಗೆ ಹನುಮಂತ ಇದ್ದಹಾಗೆ ಮೋದಿಯವರಿಗೆ ತಾನು ಎಂದು ಈ ಹಿಂದೆ ಹೇಳಿದ್ದ ಚಿರಾಗ್, ಇದೀಗ ಆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಈ ಕುರಿತು ಚುನಾವಣೆ ಬಂದಾಗ ಕೇಳಿ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.