ADVERTISEMENT

ಇಫ್ತಾರ್ ಕೂಟ ಬಹಿಷ್ಕಾರ: ಜೆಯುಎಚ್‌ ನಿರ್ಧಾರಕ್ಕೆ ಚಿರಾಗ್ ಪಾಸ್ವಾನ್‌ ಬೇಸರ

ಪಿಟಿಐ
Published 23 ಮಾರ್ಚ್ 2025, 11:12 IST
Last Updated 23 ಮಾರ್ಚ್ 2025, 11:12 IST
<div class="paragraphs"><p>ಚಿರಾಗ್ ಪಾಸ್ವಾನ್‌</p></div>

ಚಿರಾಗ್ ಪಾಸ್ವಾನ್‌

   

ಪಟ್ನಾ(ಬಿಹಾರ): ಲೋಕ ಜನಶಕ್ತಿ(ರಾಮ್‌ ವಿಲಾಸ್‌) ಪಕ್ಷದ ವತಿಯಿಂದ ಆಯೋಜಿಸಿರುವ ಇಫ್ತಾರ್‌ ಕೂಟವನ್ನು ಬಹಿಷ್ಕರಿಸಿರುವ ಜಮೀಯತ್ ಉಲೆಮಾ–ಎ–ಹಿಂದ್(ಜೆಯುಎಚ್‌) ನಿರ್ಧಾರವನ್ನು ಪಕ್ಷದ ಮುಖ್ಯಸ್ಥ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ ಟೀಕಿಸಿದ್ದಾರೆ.

ವಕ್ಫ್‌ ಮಸೂದೆ ಮತ್ತು ಮುಸ್ಲಿಮರ ವಿರುದ್ಧದ ದೌರ್ಜನ್ಯದ ಬಗ್ಗೆ ಲೋಕ ಜನಶಕ್ತಿ ಪಕ್ಷವು ಮೌನ ವಹಿಸಿರುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಜೆಯುಎಚ್‌ನ ಮುಖ್ಯಸ್ಥ ಅರ್ಷದ್‌ ಮದನಿ ಶನಿವಾರ ಎಕ್ಸ್‌ನಲ್ಲಿ ತಿಳಿಸಿದ್ದರು.

ADVERTISEMENT

‘ಪ್ರತಿಭಟನೆಯ ಸಂಕೇತವಾಗಿ ನಿತೀಶ್‌ ಕುಮಾರ್, ಚಂದ್ರಬಾಬು ನಾಯ್ಡು ಮತ್ತು ಚಿರಾಗ್ ಪಾಸ್ವಾನ್‌ ಅವರಂತಹ ಸ್ವಯಂ ಘೋಷಿತ ಜಾತ್ಯಾತೀತ ನಾಯಕರುಗಳು ಆಯೋಜಿಸುವ ಇಫ್ತಾರ್ ಕೂಟ, ಈದ್‌ ಮಿಲಾದ್‌ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ಜಮೀಯತ್ ಉಲೆಮಾ–ಎ–ಹಿಂದ್‌ ಗವಹಿಸುವುದಿಲ್ಲ’ ಎಂದು ಅರ್ಷದ್‌ ಘೋಷಿಸಿದ್ದರು.

ಇಫ್ತಾರ್‌ ಕೂಟದ ಸಿದ್ಧತೆಯ ಬಗ್ಗೆ ಪರಿಶೀಲಿಸಲು ಇಲ್ಲಿಗೆ ಆಗಮಿಸಿದ್ದ ಚಿರಾಗ್ ಪಾಸ್ವಾನ್‌ ಅವರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

‘ಮದನಿ ಸಾಹೇಬರ ಮೇಲೆ ನನಗೆ ಅಪಾರ ಗೌರವವಿದೆ. ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಆರ್‌ಜೆಡಿ ಸೇರಿದಂತೆ ಇತರ ಸ್ವಯಂ ಘೋಷಿತ ಮುಸ್ಲಿಂ ಪರ ನಾಯಕರುಗಳು ಅಲ್ಪಸಂಖ್ಯಾತ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸಲು ಸಮರ್ಥರೇ ಎಂಬುವುದರ ಕುರಿತು ಸ್ವಲ್ಪ ಯೋಚಿಸುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ’ ಎಂದು ಹೇಳಿದ್ದಾರೆ.

‘ಮುಸ್ಲಿಮನೊಬ್ಬ ಬಿಹಾರದ ಮುಖ್ಯಮಂತ್ರಿಯಾಗಲಿ ಎಂದು ನನ್ನ ತಂದೆ ರಾಮ ವಿಲಾಸ್‌ ಪಾಸ್ವಾನ್‌ ಅವರು ತಮ್ಮ ಇಡೀ ಜೀವನವನ್ನೇ ಪಣಕ್ಕಿಟ್ಟಿದ್ದರು’ ಎಂದು ಹೇಳಿದ್ದಾರೆ.

ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.