ADVERTISEMENT

Murder Case: ನಟ ದರ್ಶನ್‌ ಇತರರಿಗೆ ಜಾಮೀನು ತಡೆಯಾಜ್ಞೆಗೆ ಸುಪ್ರೀಂ ಕೋರ್ಟ್ ನಕಾರ

ಪಿಟಿಐ
Published 24 ಜನವರಿ 2025, 11:23 IST
Last Updated 24 ಜನವರಿ 2025, 11:23 IST
<div class="paragraphs"><p>ದರ್ಶನ್, ಸುಪ್ರೀಂ ಕೋರ್ಟ್</p></div>

ದರ್ಶನ್, ಸುಪ್ರೀಂ ಕೋರ್ಟ್

   

ನವದೆಹಲಿ: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನಿಗೆ ತಕ್ಷಣಕ್ಕೆ ತಡೆಯಾಜ್ಞೆ ನೀಡಲು ಮತ್ತು ಹೈಕೋರ್ಟ್‌ ಆದೇಶಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿತು.

ಆದರೆ, ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳಿಗೆ ಜಾಮೀನು ನೀಡಿರುವ ಹೈಕೋರ್ಟ್‌ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆಗೆ ಪರಿಶೀಲಿಸಲು ನ್ಯಾಯಪೀಠವು ಸಮ್ಮತಿಸಿತು.

ADVERTISEMENT

ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಆರ್‌.ಮಹಾದೇವನ್‌ ಅವರಿದ್ದ ಪೀಠವು, ಸರ್ಕಾರರದ ಅರ್ಜಿ ಪುರಸ್ಕರಿಸಿ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ನೋಟಿಸ್‌ ಜಾರಿ ಮಾಡಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ ಅವರು, ‘ಈ ಪ್ರಕರಣದಲ್ಲಿ ರೇಣುಕಸ್ವಾಮಿ ಅವರಿಗೆ ನೀಡಲಾದ ಕಿರುಕುಳ, ಹಿಂಸೆಯನ್ನು ಪರಿಗಣಿಸಬೇಕು. ಹಾಡಹಗಲೇ ಆತನನ್ನು ಕರೆತಂದು ಹಿಂಸಿಸಲಾಗಿತ್ತು’ ಎಂಬ ಅಂಶವನ್ನು ಪೀಠದ ಗಮನಕ್ಕೆ ತಂದರು.

ಜಾಮೀನು ರದ್ದುಪಡಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ. ಹೀಗಾಗಿ, ಈ ಹಂತದಲ್ಲಿ ಜಾಮೀನಿಗೆ ತಡೆಯಾಜ್ಞೆ ನೀಡಲಾಗದು ಎಂದು ಪೀಠವು ಈ ಹಂತದಲ್ಲಿ ಸ್ಪಷ್ಟಪಡಿಸಿತು.

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌, ಪವಿತ್ರಾ ಗೌಡ ಒಳಗೊಂಡು ಎಲ್ಲ 17 ಆರೋಪಿಗಳಿಗೂ ಜಾಮೀನು ದೊರೆತಿದ್ದು, ಇದರ ಆಧಾರದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.