ADVERTISEMENT

ಆಂಟಿಗುವಾ ಮತ್ತು ಬಾರ್ಬುಡಾಗೆ ಬಂದಿಳಿದ ಚೋಕ್ಸಿ

ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ

ಪಿಟಿಐ
Published 15 ಜುಲೈ 2021, 6:00 IST
Last Updated 15 ಜುಲೈ 2021, 6:00 IST
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ   

ನವದೆಹಲಿ: ಡೊಮಿನಿಕಾ ಹೈಕೋರ್ಟ್‌ನಿಂದ ಜಾಮೀನು ಪಡೆದಿರುವ ಭಾರತೀಯ ಮೂಲದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ, ಆಂಟಿಗುವಾ ಮತ್ತು ಬಾರ್ಬುಡಾಗೆ ಮರಳಿದ್ದಾರೆ. ಭಾರತವನ್ನು ತೊರೆದ ನಂತರ 2018ರಿಂದ ಅವರು ಅಲ್ಲಿನ ನಾಗರಿಕರಾಗಿ ವಾಸಿಸುತ್ತಿದ್ದಾರೆ.

ಅಕ್ರಮ ಪ್ರವೇಶದ ಕಾರಣಕ್ಕೆ ಡೊಮಿನಿಕಾದಲ್ಲಿ 51 ದಿನಗಳ ಕಾಲ ಬಂಧನದಲ್ಲಿದ್ದ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಅಲ್ಲಿನ ಹೈಕೋರ್ಟ್‌ ಇತ್ತೀಚೆಗೆ ಜಾಮೀನು ಮಂಜೂರು ಮಾಡಿತ್ತು.

ಜಾಮೀನಿಗಾಗಿ 10 ಸಾವಿರ ಡಾಲರ್‌ (₹7.45 ಲಕ್ಷ) ಅನ್ನು ಠೇವಣಿಯಾಗಿ ಇಟ್ಟ ಚೋಕ್ಸಿ ಚಾರ್ಟರ್ಡ್‌ ವಿಮಾನದಲ್ಲಿ ಆಂಟಿಗುವಾಕ್ಕೆ ಹಿಂತಿರುಗಿದ್ದಾರೆ ಎಂದು ಆಂಟಿಗುವಾ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಚೋಕ್ಸಿ ಅವರ ಸಿಟಿ ಸ್ಕ್ಯಾನ್‌ ಸೇರಿದಂತೆ ಇತರ ವೈದ್ಯಕೀಯ ವರದಿಗಳನ್ನು ಅವರ ಪರ ವಕೀಲರು ಲಗತ್ತಿಸಿದ್ದರು. ಅವರಿಗೆ ನರವಿಜ್ಞಾನಿಗಳು ಮತ್ತು ನರಶಸ್ತ್ರಚಿಕಿತ್ಸಕರ ಸಲಹೆ ಮತ್ತು ತುರ್ತು ಚಿಕಿತ್ಸೆ ಅಗತ್ಯವಿದೆಯೆಂದು ಅಲ್ಲಿನ ವೈದ್ಯರು ಶಿಫಾರಸು ಮಾಡಿದ್ದರು. ಈ ಸೇವೆಗಳು ಡೊಮಿನಿಕಾ ದ್ವೀಪದಲ್ಲಿ ಲಭ್ಯವಿಲ್ಲ ಎಂದೂ ತಿಳಿಸಲಾಗಿತ್ತು. ಈ ಎಲ್ಲ ಕಾರಣಗಳಿಂದ ಚೋಕ್ಸಿ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ಭಾರತದಲ್ಲಿ ₹ 13,500 ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಚೋಕ್ಸಿ, ಮೇ 23ರಂದು ಆಂಟಿಗುವಾ ಮತ್ತು ಬಾರ್ಬುಡಾದಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಬಳಿಕ ಅವರು ನೆರೆಯ ಡೊಮಿನಿಕಾ ದ್ವೀಪ ರಾಷ್ಟ್ರದಲ್ಲಿ ಅಕ್ರಮ ಪ್ರವೇಶಕ್ಕಾಗಿ ಬಂಧನಕ್ಕೆ ಒಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.