ADVERTISEMENT

11 ದಿನ ಕಳೆದರೂ ಸಂಸ್ಕಾರ ಕಾಣದ ಪಾದ್ರಿಯ ಶವ: ಆತನ ಮಗ ಮಾಡಿದ್ದೇನು?

ಛತ್ತೀಸ್‌ಗಢದಲ್ಲಿ ಪಾದ್ರಿಯೊಬ್ಬರು ಮೃತಪಟ್ಟು 11 ದಿನಗಳೇ ಕಳೆದರೂ ಅವರ ಅಂತ್ಯಸಂಸ್ಕಾರ ಸಾಧ್ಯವಾಗಿಲ್ಲ.

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 12:50 IST
Last Updated 18 ಜನವರಿ 2025, 12:50 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಛತ್ತೀಸ್‌ಗಢದಲ್ಲಿ ಪಾದ್ರಿಯೊಬ್ಬರು ಮೃತಪಟ್ಟು 11 ದಿನಗಳೇ ಕಳೆದರೂ ಅವರ ಅಂತ್ಯಸಂಸ್ಕಾರ ಸಾಧ್ಯವಾಗಿಲ್ಲ. ಇದರಿಂದ ರೋಸಿಹೋಗಿರುವ ಮೃತ ಪಾದ್ರಿಯ ಮಗ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.

ಈ ಕುರಿತ ಇಂದು ಅರ್ಜಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್, ಛತ್ತೀಸ್‌ಗಢ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ ಮತ್ತು ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.

ADVERTISEMENT

ಪ್ರಕರಣವೇನು?

ಬುಡಕಟ್ಟು ಜಿಲ್ಲೆಯಾಗಿರುವ ಜಗದಾಲ್ಪುರ ಜಿಲ್ಲೆಯ ಚಿಂದವಾಡ್ ಎಂಬ ಗ್ರಾಮದಲ್ಲಿ ಜನವರಿ 7 ರಂದು ಪಾದ್ರಿ ದಿಲೀಪ್ ಬಘೇಲ್ ಎನ್ನುವರು ಅನಾರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದರು. ಅಂತ್ಯಸಂಸ್ಕಾರ ನೆರವೇರಿಸಲು ದಿಲೀಪ್ ಅವರ ಮಗ ರಮೇಶ್ ಬಘೇಲ್ ಅವರು ತಂದೆಯ ಶವವನ್ನು ಗ್ರಾಮದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ, ಗ್ರಾಮಸ್ಥರು ಅವಕಾಶ ಕೊಟ್ಟಿರಲಿಲ್ಲ.

ಗ್ರಾಮದ ಸ್ಮಶಾನದಲ್ಲಿ ಮೇಲ್ವರ್ಗದ ಹಿಂದೂಗಳಿಗೆ, ದಲಿತರಿಗೆ ಹಾಗೂ ಕ್ರಿಶ್ಚಿಯನ್‌ರಿಗೆ ಶವ ಸಂಸ್ಕಾರ ನೆರವೇರಿಸಲು ಸರಪಂಚರು ಪ್ರತ್ಯೇಕ ಸ್ಥಳಗಳನ್ನು ನಿಗದಿ ಮಾಡಿದ್ದಾರೆ.

ಅದಾಗ್ಯೂ ಪಾದ್ರಿಯ ಶವವನ್ನು ಗ್ರಾಮದ ಸ್ಮಶಾನದಲ್ಲಿ ಅಥವಾ ಗ್ರಾಮದ ಯಾವುದೇ ಸರ್ಕಾರಿ, ಸ್ವಂತ ಜಮೀನಿನಲ್ಲಿ ಹೂಳಲು ಅವಕಾಶ ಕೊಡುವುದಿಲ್ಲ ಎಂದು ಸರಪಂಚರು ಆದೇಶ ಮಾಡಿದ್ದರು.

ಇದರಿಂದ ರೋಸಿಹೋದ ಮಾಹಾರ್ ಜಾತಿಗೆ ಸೇರಿದ್ದ ರಮೇಶ್ ಬಘೇಲ್, ಪೊಲೀಸರಿಗೆ ದೂರು ನೀಡಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಛತ್ತೀಸ್‌ಗಢ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಜನವರಿ 15ರಂದು ಆದೇಶ ನೀಡಿದ್ದ ಹೈಕೋರ್ಟ್, ಶವಸಂಸ್ಕಾರಕ್ಕೆ ಅನುಮತಿ ನೀಡಿದರೆ ಗ್ರಾಮದಲ್ಲಿ ಗಲಭೆಯ ವಾತಾವರಣಕ್ಕೆ ಕಾರಣವಾಗಬಹುದು ಎಂದು ಅರ್ಜಿಯನ್ನು ವಜಾ ಮಾಡಿತ್ತು.

ಬಳಿಕ ಗ್ರಾಮದಲ್ಲಿ 30ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ರಮೇಶ್ ಎಷ್ಟೇ ಮನವಿ ಮಾಡಿದರೂ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಿರಲಿಲ್ಲ. ಇದರಿಂದ ಅವರ ತಂದೆಯ ಶವ ಜಗದಾಲ್ಪುರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಯೇ ಇದೆ.

ಬಳಿಕ ರಮೇಶ್ ಬಘೇಲ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇವರ ಅರ್ಜಿ ಆಲಿಸಿರುವ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠ, ಛತ್ತೀಸ್‌ಗಢ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ‘ಪಂಚಾಯಿತಿ ಆದೇಶವನ್ನು ಬಿಟ್ಟು ಹಾಕಿ, ಹೈಕೋರ್ಟ್ ಸಹ ಈ ಕೇಸ್‌ನಲ್ಲಿ ವಿಲಕ್ಷಣ ಆದೇಶ ನೀಡಿರುವುದು ನಮಗೆ ಆಶ್ಚರ್ಯ ತರಿಸಿದೆ. ರಾಜ್ಯ ಸರ್ಕಾರ ಏನು ಮಾಡುತ್ತಿದೆ? ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಿ’ ಎಂದು ತಾಕೀತು ಮಾಡಿದೆ.

ಈ ಪ್ರಕರಣದ ವಿಚಾರಣೆ ಜನವರಿ 20 ರಂದು ಮರು ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.