ನಾಗರಿಕರ ರಕ್ಷಣಾ ಅಣಕು ಪ್ರದರ್ಶನ
ಪಿಟಿಐ ಸಂಗ್ರಹ ಚಿತ್ರ
ನವದೆಹಲಿ: ಯುದ್ಧ ವಿರಾಮವಿದ್ದರೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಪಾಕಿಸ್ತಾನದ ಗಡಿಯಲ್ಲಿರುವ ರಾಜ್ಯಗಳಾದ ಗುಜರಾತ್, ಪಂಜಾಬ್, ರಾಜಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ಎದುರಾದರೆ ನಾಗರಿಕರನ್ನು ಹೇಗೆ ರಕ್ಷಿಸಬೇಕೆಂಬ ಕುರಿತಾದ ರಕ್ಷಣಾ ಅಣಕು ಪ್ರದರ್ಶನ ನಡೆಯಲಿದೆ.
ಇತ್ತೀಚೆಗೆ ಮುಕ್ತಾಯಗೊಂಡ ನಾಲ್ಕು ದಿನಗಳ ಸಂಘರ್ಷದ ಸಂದರ್ಭದಲ್ಲಿ ಈ ರಾಜ್ಯಗಳ ಮೇಲೆ ಪಾಕಿಸ್ತಾನದಿಂದ ಭಾರಿ ದಾಳಿ ಯತ್ನ ನಡೆದಿತ್ತು. ಅಣಕು ಪ್ರದರ್ಶನ ಸಮಯದಲ್ಲಿ ಜನರು ಜಾಗರೂಕರಾಗಿರಲು ಸೂಚನೆ ನೀಡಲಾಗುವುದು ಎಂದು ಮೂಲಗಳು ತಿಳಿಸಿರುವುದಾಗಿ ‘ಇಂಡಿಯಾ ಟುಡೇ’ವರದಿ ತಿಳಿಸಿವೆ.
ಅಣಕು ಪ್ರದರ್ಶನದ ಪ್ರಾಥಮಿಕ ಉದ್ದೇಶಗಳಲ್ಲಿ ನಿಯಂತ್ರಣ ಕೊಠಡಿಗಳು ಮತ್ತು ವಾಯುದಾಳಿ ಎಚ್ಚರಿಕೆ ವ್ಯವಸ್ಥೆಗಳ ಕಾರ್ಯಾಚರಣೆಯನ್ನು ಪರೀಕ್ಷಿಸುವುದು ಸೇರಿದೆ. ಇದು ವೈದ್ಯ ಸೇವೆಗಳು, ಅಗ್ನಿಶಾಮಕ ದಳ, ರಕ್ಷಣಾ ಕಾರ್ಯಾಚರಣೆಗಳು, ಡಿಪೋ ನಿರ್ವಹಣೆ ಮತ್ತು ಸ್ಥಳಾಂತರ ಯೋಜನೆಗಳ ತಯಾರಿಯಂತಹ ನಾಗರಿಕ ರಕ್ಷಣಾ ಸೇವೆಗಳ ಪರಿಣಾಮಕಾರಿತ್ವವನ್ನು ಸಹ ನಿರ್ಣಯಿಸುತ್ತದೆ.
ಭಾರತವು ಆಪರೇಷನ್ ಸಿಂಧೂರ ಆರಂಭಿಸುವ ಕೆಲ ಗಂಟೆಗಳ ಮೊದಲು, ಮೇ 7ರಂದು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಆದೇಶದ ಅನ್ವಯ ಆಪರೇಷನ್ ಅಭ್ಯಾಸ ಹೆಸರಲ್ಲಿ ರಾಷ್ಟ್ರವ್ಯಾಪಿ ಅಣಕು ಪ್ರದರ್ಶನ ನಡೆಸಲಾಗಿತ್ತು.
ಶತ್ರು ದೇಶದಿಂದ ದಾಳಿಯ ಸಂದರ್ಭದಲ್ಲಿ ತಮ್ಮನ್ನು ಮತ್ತು ತಮ್ಮ ಸುತ್ತಮುತ್ತಲಿನ ಜನರನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಅಣಕು ಪ್ರದರ್ಶನದ ಸಂದರ್ಭ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ವಿವರಿಸಲಾಗಿತ್ತು. ವಾಯುದಾಳಿ ಎಚ್ಚರಿಕೆ ಸೈರನ್‌ಗಳನ್ನು ಸಕ್ರಿಯಗೊಳಿಸಲಾಗಿತ್ತು. 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ 250 ಸ್ಥಳಗಳಲ್ಲಿ ಆಪರೇಷನ್ ಅಭ್ಯಾಸ್ ನಡೆಸಲಾಗಿತ್ತು.
ಈ ಹಿಂದೆ 1971ರ ಪಾಕಿಸ್ತಾನದೊಂದಿಗಿನ ಯುದ್ಧದ ಸಂದರ್ಭ ಇದೇ ರೀತಿಯ ಅಣಕು ಪ್ರದರ್ಶನ ನಡೆದಿತ್ತು.
ಆಪರೇಷನ್ ಸಿಂಧೂರದ ಸಂದರ್ಭದಲ್ಲಿ ಪಾಕಿಸ್ತಾನದಿಂದ ಪದೇ ಪದೇ ವಾಯುದಾಳಿ ಯತ್ನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಉತ್ತರ ಮತ್ತು ವಾಯುವ್ಯ ಭಾರತದಾದ್ಯಂತದ 32 ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿತ್ತು.
ಪಾಕಿಸ್ತಾನದೊಂದಿಗೆ 532 ಕಿ.ಮೀ ಗಡಿ ಹಂಚಿಕೊಂಡಿರುವ ಪಂಜಾಬ್‌ನ ಎಲ್ಲ ಗಡಿ ಜಿಲ್ಲೆಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿತ್ತು. ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಫಿರೋಜ್‌ಪುರ, ಪಠಾಣ್‌ಕೋಟ್, ಫಜಿಲ್ಕಾ, ಅಮೃತಸರ, ಗುರುದಾಸ್ಪುರ ಮತ್ತು ತರಣ್ ತರಣ್ ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು.
ಅದೇ ರೀತಿ, ಪಾಕಿಸ್ತಾನದೊಂದಿಗೆ 1,037 ಕಿ.ಮೀ ಗಡಿ ಹಂಚಿಕೊಂಡಿರುವ ರಾಜಸ್ಥಾನದ ಗಡಿ ಪ್ರದೇಶಗಳಲ್ಲಿನ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.