ADVERTISEMENT

ಕಾಶ್ಮೀರ: ಉಗ್ರರ ಎನ್‌ಕೌಂಟರ್ ಬಳಿಕ ಭುಗಿಲೆದ್ದ ಗಲಭೆ, ಸೇನೆ ಗುಂಡೇಟಿಗೆ 7 ಜನ ಬಲಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 14:08 IST
Last Updated 15 ಡಿಸೆಂಬರ್ 2018, 14:08 IST
ಪುಲ್ವಾಮಾ ಜಿಲ್ಲೆಯಲ್ಲಿ ಸೇನೆಯ ಗುಂಡಿಗೆ ಬಲಿಯಾದ ಮುರ್ತಾಜಾ ಬಶೀರ್ ಎಂಬಾತನ ಅಂತ್ಯಕ್ರಿಯೆ ವೇಳೆ ರೋದಿಸುತ್ತಿರುವ ಆತನ ಕುಟುಂಬ ಸದಸ್ಯರು –ರಾಯಿಟರ್ಸ್ ಚಿತ್ರ
ಪುಲ್ವಾಮಾ ಜಿಲ್ಲೆಯಲ್ಲಿ ಸೇನೆಯ ಗುಂಡಿಗೆ ಬಲಿಯಾದ ಮುರ್ತಾಜಾ ಬಶೀರ್ ಎಂಬಾತನ ಅಂತ್ಯಕ್ರಿಯೆ ವೇಳೆ ರೋದಿಸುತ್ತಿರುವ ಆತನ ಕುಟುಂಬ ಸದಸ್ಯರು –ರಾಯಿಟರ್ಸ್ ಚಿತ್ರ   

ಶ್ರೀನಗರ: ಉಗ್ರರು ಹಾಗೂ ಭದ್ರತಾಪಡೆ ನಡುವಿನ ಎನ್‌ಕೌಂಟರ್ ಬಳಿಕ ಭುಗಿಲೆದ್ದ ಗಲಭೆಯಲ್ಲಿ ಏಳು ನಾಗರಿಕರು ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.

ಗುಪ್ತಚರ ಮಾಹಿತಿ ಆಧರಿಸಿ ಸಿರ್ನೂ ಎಂಬ ಗ್ರಾಮದಲ್ಲಿ ಅಡಗಿದ್ದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಶನಿವಾರ ಮುಂಜಾನೆ ಹೊಡೆದುರುಳಿಸಿದವು. ಸೈನ್ಯದಿಂದ ನಾಪತ್ತೆಯಾಗಿ, ಉಗ್ರರ ಗುಂಪು ಸೇರಿದ್ದ ಝಹೂರ್ ಅಹ್ಮದ್ ಥೋಕರ್ ಎಂಬಾತನೂ ಹತರಲ್ಲಿ ಸೇರಿದ್ದಾನೆ.

ಸಿರ್ನೂ ಗ್ರಾಮದವನೇ ಆದ ಥೋಕರ್ ಮೇಲೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ ವಿಷಯ ಹರಡುತ್ತಿದ್ದಂತೆ, ಗ್ರಾಮಸ್ಥರು ಘಟನಾ ಸ್ಥಾಳದತ್ತ ಧಾವಿಸಿದರು. ಎನ್‌ಕೌಂಟರ್ ಕೇವಲ 25 ನಿಮಿಷಗಳಲ್ಲಿ ಮುಗಿದುಹೋಯಿತು. ಆದರೆ ಆ ಬಳಿಕ ಗ್ರಾಮಸ್ಥರು ಒಡ್ಡಿದ ಪ್ರತಿರೋಧವನ್ನು ನಿಭಾಯಿಸಲು ಸೇನೆ ಸಿಬ್ಬಂದಿ ಹರಸಾಹಸಪಟ್ಟರು.

ADVERTISEMENT

ಗುಂಪುಗುಂಪಾಗಿ ಧಾವಿಸಿದ ಜನರನ್ನ ಎಚ್ಚರಿಸಲು ಆಗಸದಲ್ಲಿ ಗುಂಡು ಹಾರಿಸಲಾಯಿತು. ಇದಾವುದಕ್ಕೂ ಬಗ್ಗದಿದ್ದಾಗ ಭದ್ರತಾ ಪಡೆಗಳು ಉದ್ರಿಕ್ತ ಗುಂಪಿನ ಮೇಲೆ ಗುಂಡು ಹಾರಿಸಿದವು.

ಏಳು ಗ್ರಾಮಸ್ಥರು ಸೈನಿಕರ ಗುಂಡೇಟಿನಿಂದ ಮೃತಪಟ್ಟರು. ಹಲವರು ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ.ಘಟನೆಯಲ್ಲಿ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ಧಾರೆ.

ಬಂದ್‌ಗೆ ಕರೆ: ನಾಗರಿಕರ ಹತ್ಯೆಯನ್ನು ಖಂಡಿಸಿ ಮೂರು ದಿನಗಳ ಬಂದ್‌ಗೆ ಕಾಶ್ಮೀರ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದಾರೆ.

ಇದೇ 17ರಂದು ಸೇನಾ ಮುಖ್ಯ ಕಚೇರಿಯಿರುವ ಬಾದಾಮಿಬಾಗ್‌ವರೆಗೆಜಾಥಾ ನಡೆಸಲು ನಿರ್ಧರಿಸಲಾಗಿದೆ. ‘ಕಾಶ್ಮೀರಿಗಳನ್ನು ಪ್ರತಿನಿತ್ಯವೂ ಕೊಲ್ಲುವ ಬದಲು ಒಂದೇ ಬಾರಿಗೆ ಹತ್ಯೆ ಮಾಡಿ ಎಂದು ಸೇನೆಯನ್ನು ಕೇಳಿಕೊಳ್ಳುತ್ತೇವೆ’ ಎಂದು ಪ್ರತ್ಯೇಕತಾವಾದಿ ನಾಯಕ ಮಿರ್ವಾಜ್ ಆಕ್ರೋಶದಿಂದ ಹೇಳಿದ್ದಾರೆ.

ಹಿಂಸಾಚಾರದ ಬಳಿಕ ದಕ್ಷಿಣ ಕಾಶ್ಮೀರ ಹಾಗೂ ಶ್ರೀನಗರದಲ್ಲಿ ಶನಿವಾರವೇ ಬಂದ್‌ ರೀತಿಯ ವಾತಾವರಣ ನಿರ್ಮಾಣವಾಗಿತ್ತು.

ಉಗ್ರನಾಗಿದ್ದ ಯೋಧ!

ಸೈನಿಕನಾಗಿ ಕೆಲಸ ಮಾಡುತ್ತಿದ್ದ ಥೋಕರ್, ಬಾರಾಮುಲ್ಲಾ ಜಿಲ್ಲೆಯ ಗಂಟ್‌ಮುಲ್ಲಾ ಪ್ರದೇಶದ ಸೇನಾಘಟಕದಿಂದ ಕಳೆದ ವರ್ಷದ ಜುಲೈನಲ್ಲಿ ನಾಪತ್ತೆಯಾಗಿದ್ದ.

ಸರ್ವೀಸ್ ರೈಫಲ್ ಹಾಗೂ ಮದ್ದುಗುಂಡುಗಳ ಜೊತೆ ಪರಾರಿಯಾಗಿ ಉಗ್ರಗಾಮಿ ಸಂಘಟನೆಯನ್ನು ಆತ ಸೇರಿಕೊಂಡಿದ್ದ.

ಥೋಕರ್ ಜೊತೆ ಇನ್ನಿಬ್ಬರು ಉಗ್ರರು ಹತರಾಗಿದ್ದು, ಅವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.