ಇಟಾನಗರ: ‘ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗವು ಜನ ಸೇವೆಗಾಗಿ ಅಸ್ತಿತ್ವದಲ್ಲಿರಬೇಕು. ಜನರಿಗೆ ಕಡಿಮೆ ಖರ್ಚಿನಲ್ಲಿ, ಕ್ಷಿಪ್ರಗತಿಯಲ್ಲಿ ಮನೆ ಬಾಗಿಲಲ್ಲೇ ನ್ಯಾಯ ಲಭಿಸಬೇಕು’ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅಭಿಪ್ರಾಯಪಟ್ಟರು.
ಭಾನುವಾರ ಇಲ್ಲಿ ಗುವಾಹತಿ ಹೈಕೋರ್ಟ್‌ನ ಇಟಾನಗರ ಕಾಯಂ ಪೀಠದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ‘ನಾನು ಯಾವತ್ತೂ ವಿಕೇಂದ್ರೀಕರಣದ ಕಟ್ಟಾ ಬೆಂಬಲಿಗ. ನ್ಯಾಯವು ಅಧಿಕಾರಸ್ಥರ ಕೊಠಡಿಯಲ್ಲಿ ಉಳಿಯಬಾರದು. ಅದು ಜನರಿಗೆ ಅವರ ಮನೆ ಬಾಗಿಲಲ್ಲೇ ಸುಲಭವಾಗಿ ದೊರೆಯುವಂತಾಗಬೇಕು’ ಎಂದರು.
‘ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ ಇರುವುದು ಜನರಿಗೆ ನ್ಯಾಯ ಒದಗಿಸಲಿಕ್ಕಾಗಿಯೇ’ ಎಂದು ಅವರು ಪ್ರತಿಪಾದಿಸಿದರು.
ಅರುಣಾಚಲ ಪ್ರದೇಶದ ವಿವಿಧತೆಯಲ್ಲಿ ಏಕತೆಯನ್ನು ಅಭಿನಂದಿಸಿದ ಸಿಜೆಐ, ರಾಜ್ಯವು 26 ಪ್ರಮುಖ ಬುಡಕಟ್ಟು ಪಂಗಡ ಹಾಗೂ 100ಕ್ಕೂ ಹೆಚ್ಚು ಉಪ ಪಂಗಡಗಳನ್ನು ಹೊಂದಿದೆ. ಇಲ್ಲಿನ ಪ್ರತಿ ಬುಡಕಟ್ಟಿನ ಸಂಪ್ರದಾಯ, ಸಂಸ್ಕೃತಿ ಸಂರಕ್ಷಣೆಗೆ ಸರ್ಕಾರ ಶ್ರಮಿಸಬೇಕು ಎಂದರು.
‘ದೇಶದ ಅಭಿವೃದ್ಧಿ ಆಗಬೇಕು. ಜತೆಗೆ ಪರಂಪರೆ, ಸಂಸ್ಕೃತಿಯೂ ಉಳಿಯಬೇಕು. ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಸಂವಿಧಾನದಡಿ ನಮ್ಮ ಮೂಲ ಕರ್ತವ್ಯವೂ ಆಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ನೆನಪಿಸಿದರು.
‘ಕಳೆದ ಎರಡು ವರ್ಷಗಳಲ್ಲಿ ಈಶಾನ್ಯ ಭಾರತದ ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದು, ಅಲ್ಲಿನ ಅದ್ಭುತವಾದ ಬುಡಕಟ್ಟು ಸಂಸ್ಕೃತಿ ಕಂಡು ಮೂಕ ವಿಸ್ಮಿತನಾಗಿದ್ದೇನೆ. ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿದಾಗ ಅಲ್ಲಿನ ಮಹಿಳೆಯೊಬ್ಬರು ‘ನಿಮ್ಮ ಮನೆಗೆ ನಿಮಗೆ ಸ್ವಾಗತ’ ಎಂದು ಆಹ್ವಾನ ನೀಡಿದ್ದು ನನ್ನ ಹೃದಯವನ್ನು ಸ್ಪರ್ಶಿಸಿತು’ ಎಂದು ಅವರು ಸ್ಮರಿಸಿಕೊಂಡರು.
₹135.35 ಕೋಟಿ ವೆಚ್ಚದಲ್ಲಿ ಇಟಾನಗರದಲ್ಲಿ ಹೈಕೋರ್ಟ್ ಪೀಠದ ಕಟ್ಟಡ ನಿರ್ಮಿಸಲಾಗಿದೆ. 2018ರಲ್ಲಿ ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. 2021ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು.
ಗುವಾಹತಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಶುತೋಷ್ ಕುಮಾರ್, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಉಜ್ವಲ್ ಭುಯಾನ್, ಎನ್.ಕೋಟೀಶ್ವರ್ ಸಿಂಗ್, ಸಂದೀಪ್ ಮೆಹ್ತಾ, ವಿಜಯ್ ಬಿಷ್ಣೋಯ್ ಭಾಗವಹಿಸಿದ್ದರು.
ಶಾಂತಿ ಮತ್ತು ಯುದ್ಧದ ಸಂದರ್ಭದಲ್ಲಿ ಭಾರತವನ್ನು ಒಗ್ಗೂಡಿಸಿರುವುದು ಮತ್ತು ಬಲಗೊಳಿಸಿರುವುದು ನಮ್ಮ ಸಂವಿಧಾನ. 75 ವರ್ಷಗಳ ನಂತರವೂ ನಾವು ಅದಕ್ಕೆ ಸಾಕ್ಷಿಯಾಗಿದ್ದೇವೆಬಿ.ಆರ್.ಗವಾಯಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.