ADVERTISEMENT

ನ್ಯಾ‌ಯಾಂಗ ಸಕ್ರಿಯತೆಯು ನ್ಯಾಯಾಂಗ ಭಯೋತ್ಪಾದನೆ ಆಗಬಾರದು: ಸಿಜೆಐ ಬಿ.ಆರ್. ಗವಾಯಿ

ರಾಷ್ಟ್ರಪತಿಯ ಉಲ್ಲೇಖದ ವಿಚಾರಣೆ ವೇಳೆ ಸಿಜೆಐ ಗವಾಯಿ ಅವಲೋಕನ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 14:40 IST
Last Updated 21 ಆಗಸ್ಟ್ 2025, 14:40 IST
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ (ಪಿಟಿಐ ಸಂಗ್ರಹ ಚಿತ್ರ)
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ (ಪಿಟಿಐ ಸಂಗ್ರಹ ಚಿತ್ರ)   

ನವದೆಹಲಿ: ನ್ಯಾಯಾಂಗದ ಸಕ್ರಿಯತೆಯು ನ್ಯಾಯಾಂಗ ಭಯೋತ್ಪಾದನೆ ಆಗಬಾರದು ಎಂದು ಸಿಜೆಐ ಬಿ.ಆರ್. ಗವಾಯಿ ಅವರು ಗುರುವಾರ ಅವಲೋಕಿಸಿದ್ದಾರೆ.

ರಾಜ್ಯ ವಿಧಾನಸಭೆಗಳಿಂದ ಜಾರಿಯಾದ ಮಸೂದೆಗಳನ್ನು ರಾಜ್ಯಪಾಲರು ಮತ್ತು ರಾಷ್ಟ್ರಪತಿ ಎಷ್ಟು ಸಮಯದಲ್ಲಿ ನಿರ್ಧರಿಸಬೇಕು ಎಂಬ ವಿಚಾರವಾಗಿ ನ್ಯಾಯಾಲಯವು ಗಡುವು ವಿಧಿಸಬಹುದೆ ಎಂಬ ಸಾಂವಿಧಾನಿಕ ಪ್ರಶ್ನೆಯನ್ನು ಒಳಗೊಂಡ ವಿಚಾರಣೆಯ ವೇಳೆ ಅವರು ಈ ರೀತಿ ಹೇಳಿದ್ದಾರೆ. 

‘ಅನುಭವಿ ಜನಪ್ರತಿನಿಧಿಗಳನ್ನು ಎಂದಿಗೂ ದುರ್ಬಲಗೊಳಿಸಬಾರದು’ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಿಜೆಐ ಇದ್ದ ಪೀಠಕ್ಕೆ ತಿಳಿಸಿದರು. ಆಗ ನ್ಯಾಯಮೂರ್ತಿ ಗವಾಯಿ ಈ ಹೇಳಿಕೆ ನೀಡಿದ್ದಾರೆ.  

ADVERTISEMENT

‘ಜನಪ್ರತಿನಿಧಿಗಳ ಬಗ್ಗೆ ನಾವು ಯಾವತ್ತೂ ಏನನ್ನೂ ಹೇಳಿಲ್ಲ. ನ್ಯಾಯಾಂಗ ಸಕ್ರಿಯತೆಯು ನ್ಯಾಯಾಂಗ ಭಯೋತ್ಪಾದನೆ ಅಥವಾ ಸಾಹಸ ಆಗಬಾರದು ಎಂದು ನಾನು ಪ್ರತಿಪಾದಿಸುತ್ತಲೇ ಇದ್ದೇನೆ’ ಎಂದು ಗವಾಯಿ ಹೇಳಿದ್ದಾರೆ. ಪೀಠದಲ್ಲಿ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ವಿಕ್ರಮ್ ನಾಥ್, ಪಿ.ಎಸ್. ನರಸಿಂಹ ಮತ್ತು ಎ.ಎಸ್‌. ಚಂದೂರ್ಕರ್ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.