ADVERTISEMENT

ಕಾನೂನು ಕಲಿಕಾರ್ಥಿಗಳ ನೆರವು ಪಡೆಯಲು ಹೊಸ ಮಾರ್ಗಸೂಚಿ: ಸಿಜೆಐ ಅನುಮೋದನೆ

ಪಿಟಿಐ
Published 3 ಏಪ್ರಿಲ್ 2023, 14:21 IST
Last Updated 3 ಏಪ್ರಿಲ್ 2023, 14:21 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಗೆ ಕಾನೂನಿಗೆ ಸಂಬಂಧಿಸಿದ ಸಂಶೋಧನೆಗಳಲ್ಲಿ ನೆರವು ನೀಡುವ ಸಲುವಾಗಿ ಕಾನೂನು ಕಲಿಕಾರ್ಥಿಗಳನ್ನು (ಇಂಟರ್ನಿಗಳು) ತೊಡಗಿಸಿಕೊಳ್ಳಲು ಹೊಸದಾಗಿ ರೂಪಿಸಲಾಗಿರುವ ಮಾರ್ಗಸೂಚಿಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು ಅನುಮೋದನೆ ನೀಡಿದರು.

‘ಕಾನೂನು ಕಲಿಕಾರ್ಥಿಗಳು ಮತ್ತು ಸಂಶೋಧನಾ ಸಹಾಯಕರನ್ನು ಸುಪ್ರೀಂ ಕೋರ್ಟ್‌ಗೆ ಅರೆಕಾಲಿಕ ಅವಧಿಗೆ ತೊಡಗಿಸಿಕೊಳ್ಳುವ ಯೋಜನೆ’ಯನ್ನು ಸುಪ್ರೀಂ ಕೋರ್ಟ್‌ ರೂಪಿಸಿದೆ. ಅದರಂತೆ ನೇಮಕವಾಗುವ ಕಾನೂನು ಕಲಿಕಾರ್ಥಿಗಳಿಗೆ ಅವರ ನಿಯೋಜನೆ ಅವಧಿಯಲ್ಲಿ ಮಾಸಿಕ ₹80,000 ವೇತನ ನೀಡಲಾಗುವುದು. ಈ ಅವಧಿಯಲ್ಲಿ ಅವರಿಗೆ ಇತರ ಭತ್ಯೆಗಳು ಮತ್ತು ಇತರ ವಿಶೇಷ ಸೌಲಭ್ಯಗಳನ್ನು ನೀಡಲಾಗುವುದಿಲ್ಲ. 12 ತಿಂಗಳ ಬಳಿಕವೂ ಕಲಿಕಾರ್ಥಿಯ ನಿಯೋಜನೆ ಅವಧಿ ವಿಸ್ತರಣೆಗೊಂಡರೆ ಅವರಿಗೆ ಮಾಸಿಕ ₹90,000 ನೀಡಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ನ್ಯಾಯಮೂರ್ತಿಗಳು ನಾಲ್ವರು ಕಾನೂನು ಕಲಿಕಾರ್ಥಿಗಳ ಸಹಾಯ ಪಡೆದುಕೊಳ್ಳಬಹುದು. ಅವರಲ್ಲಿ ಮೊದಲ ಇಬ್ಬರು ಕಲಿಕಾರ್ಥಿಗಳನ್ನು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯ ಆಯ್ಕೆ ಪ್ರಕ್ರಿಯೆ ಪ್ರಕಾರ ನೇಮಿಸಲಾಗುವುದು. ಕೆಲಸದ ಒತ್ತಡ ಹೆಚ್ಚು ಇದ್ದಲ್ಲಿ ಮುಖ್ಯ ನ್ಯಾಯಮೂರ್ತಿ ಸೇರಿ ಎಲ್ಲಾ ನ್ಯಾಯಮೂರ್ತಿಗಳು ಐದನೇ ಕಲಿಕಾರ್ಥಿಯನ್ನು ನೇಮಿಸಿಕೊಳ್ಳಲು ಅವಕಾಶ ಇದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ADVERTISEMENT

ಸಂಶೋಧನೆಗೆ ನೆರವಾಗುವುದಲ್ಲದೇ, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಪಟ್ಟಿಯಾಗುವ ಪ್ರಕರಣಗಳ ಕುರಿತು ಕಲಿಕಾರ್ಥಿಗಳು ಸಾರಾಂಶವನ್ನು ತಯಾರಿಸುತ್ತಾರೆ. ಪ್ರತಿದಿನ ನಡೆಯುವ ವಿಚಾರಣೆಗಳ ಮುಖ್ಯಾಂಶಗಳನ್ನು ಅವರು ದಾಖಲಿಸಿಕೊಳ್ಳಲಿದ್ದಾರೆ ಮತ್ತು ಪೀಠಗಳು ತೀರ್ಪು ನೀಡಲಿರುವ ಪ್ರಕರಣಗಳ ವಿಚಾರಣೆ ವೇಳೆ ನಡೆದ ವಾದಗಳನ್ನು ಅವರು ದಾಖಲಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.