ADVERTISEMENT

ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೆ ಯು.ಯು ಲಲಿತ್‌ ಹೆಸರು ಶಿಫಾರಸು ಮಾಡಿದ ಸಿಜೆಐ

ಐಎಎನ್ಎಸ್
Published 4 ಆಗಸ್ಟ್ 2022, 8:51 IST
Last Updated 4 ಆಗಸ್ಟ್ 2022, 8:51 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ನ್ಯಾಯಮೂರ್ತಿ ಉದಯ್‌ ಉಮೇಶ್‌ ಲಲಿತ್‌ ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಿ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಎನ್‌.ವಿ ರಮಣ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

‘ಭಾರತದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರ ಹೆಸರನ್ನು ರಮಣ ಶಿಫಾರಸು ಮಾಡಿದ್ದಾರೆ. ತಮ್ಮ ಶಿಫಾರಸು ಪತ್ರದ ಪ್ರತಿಯನ್ನು ಖುದ್ದಾಗಿ ಹಸ್ತಾಂತರಿಸಿದ್ದಾರೆ’ ಎಂದು ಕಾನೂನು ಇಲಾಖೆಯು ಗುರುವಾರ ತಿಳಿಸಿದೆ.

ಆಗಸ್ಟ್ 26 ರಂದು ಮುಖ್ಯನ್ಯಾಯಮೂರ್ತಿ ರಮಣ ನಿವೃತ್ತರಾಗಲಿದ್ದಾರೆ. ಮುಂದಿನ ಮುಖ್ಯನ್ಯಾಯಮೂರ್ತಿಯ ಸ್ಥಾನಕ್ಕೆ ಶಿಫಾರಸು ಮಾಡುವಂತೆ ಕಾನೂನು ಸಚಿವಾಲಯದಿಂದ ಬುಧವಾರ ರಮಣ ಅವರಿಗೆ ಮನವಿ ಮಾಡಲಾಗಿತ್ತು.

ADVERTISEMENT

‘ಹೆಸರು ಶಿಫಾರಸು ಮಾಡುವಂತೆ ಕೇಂದ್ರ ಕಾನೂನು ಇಲಾಖೆಯು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದೆ’ ಎಂದು ಸುಪ್ರೀಂ ಕೋರ್ಟ್‌ನಿಂದ ಬುಧವಾರ ಮಾಧ್ಯಮ ಹೇಳಿಕೆಯೂ ಬಿಡುಗಡೆಯಾಗಿತ್ತು.

ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಗಳಾಗಿರುವ ಯು.ಯು ಲಲಿತ್ ಅವರು ಶಿಫಾರಸಿನಂತೆ ಭಾರತದ ಮುಖ್ಯ ನ್ಯಾಯಮೂರ್ತಿಯಾದರೂ, ಅವರ ಅಧಿಕಾರವಧಿ ಕೇವಲ ಮೂರು ತಿಂಗಳಿಗೆ ಸೀಮಿತವಾಗಲಿದೆ. ನ್ಯಾಯಮೂರ್ತಿ ಲಲಿತ್ ಅವರು ನವೆಂಬರ್ 8 ರಂದು ನಿವೃತ್ತರಾಗಲಿದ್ದಾರೆ.

ಮುಂದಿನ ಮುಖ್ಯನ್ಯಾಯಮೂರ್ತಿಯನ್ನು ನಾಮನಿರ್ದೇಶನ ಮಾಡುವಂತೆ ನಿವೃತ್ತಿಯಾಗಲಿರುವ ಮುಖ್ಯನ್ಯಾಯಮೂರ್ತಿಗಳನ್ನು ಕಾನೂನು ಸಚಿವರು ತಿಂಗಳಿಗೂ ಮೊದಲೇ ಕೋರುತ್ತಾರೆ. ಇದು, ಮುಖ್ಯನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ಪಾಲಿಸಿಕೊಂಡು ಬಂದಿರುವ ಸಂಪ್ರದಾಯವೂ ಹೌದು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.