ADVERTISEMENT

ಬಾಣಸಿಗನ ಮಗಳಿಗೆ ಸಿಜೆಐ ಸನ್ಮಾನ

ಅಮೆರಿಕದಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿ ವೇತನ ಪಡೆದ ‘ಪ್ರಜ್ಞಾ’ ಸಾಧನೆ

ಪಿಟಿಐ
Published 13 ಮಾರ್ಚ್ 2024, 15:55 IST
Last Updated 13 ಮಾರ್ಚ್ 2024, 15:55 IST
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ಇತರ ನ್ಯಾಯಾಧೀಶರ ಜೊತೆ ಕಾನೂನುಶಾಸ್ತ್ರ ವಿದ್ಯಾರ್ಥಿನಿ ಪ್ರಜ್ಞಾ ಮತ್ತು ಅವರ ಪೋಷಕರು  –ಪಿಟಿಐ ಚಿತ್ರ
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ಇತರ ನ್ಯಾಯಾಧೀಶರ ಜೊತೆ ಕಾನೂನುಶಾಸ್ತ್ರ ವಿದ್ಯಾರ್ಥಿನಿ ಪ್ರಜ್ಞಾ ಮತ್ತು ಅವರ ಪೋಷಕರು  –ಪಿಟಿಐ ಚಿತ್ರ   

ನವದೆಹಲಿ: ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಕಾನೂನುಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಬಾಣಸಿಗರೊಬ್ಬರ ಮಗಳೊಬ್ಬಳು ವಿದ್ಯಾರ್ಥಿವೇತನ ಪಡೆದಿದ್ದಾಳೆ. ಅವಳ ಸಾಧನೆ ಗುರುತಿಸಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ಇತರ ನ್ಯಾಯಮೂರ್ತಿಗಳು ಆಕೆಯನ್ನು ಬುಧವಾರ ಆತ್ಮೀಯವಾಗಿ ಸನ್ಮಾನಿಸಿದರು.

ಕರ್ತವ್ಯದ ಅವಧಿ ಆರಂಭವಾಗುವ ಮುನ್ನವೇ ನ್ಯಾಯಮೂರ್ತಿಗಳ ಹಜಾರದಲ್ಲಿ ನೆರೆದಿದ್ದ ನ್ಯಾಯಮೂರ್ತಿಗಳು ಕಾನೂನುಶಾಸ್ತ್ರ ಸಂಶೋಧಕಿ ಪ್ರಜ್ಞಾಗೆ ಎದ್ದುನಿಂತು ಗೌರವ ಸಲ್ಲಿಸಿದರು. ಈಕೆ ಸುಪ್ರೀಂ ಕೋರ್ಟ್‌ನಲ್ಲಿ ಬಾಣಸಿಗರಾಗಿರುವ ಅಜಯ್‌ ಕುಮಾರ್‌ ಸಮಾಲ್‌ ಅವರ ಮಗಳು. ಅಮೆರಿಕದ ಯುನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ ಅಥವಾ ಯುನಿವರ್ಸಿಟಿ ಆಫ್‌ ಮಿಶಿಗನ್‌ನಲ್ಲಿ ವ್ಯಾಸಂಗ ಮಾಡಲು ಈಕೆಗೆ ವಿದ್ಯಾರ್ಥಿ ವೇತನ ದೊರಕಿದೆ.

‘ಸ್ವಂತಬಲದಿಂದ ಪ್ರಜ್ಞಾ ಈ ಸಾಧನೆ ಮಾಡಿದ್ದಾಳೆ. ಮುಂದೆ ಅವಳಿಗೆ ಅಗತ್ಯವಿರುವ ಎಲ್ಲವನ್ನೂ ನಾವು ಒದಗಿಸೋಣ. ಅವಳು ದೇಶಕ್ಕೆ ವಾಪಸ್ಸಾಗಿ ಇಲ್ಲಿ ಸೇವೆ ಸಲ್ಲಿಸುವುದನ್ನು ನಾವು ಎದುರು ನೋಡುತ್ತೇವೆ’ ಎಂದು ಸಿಜೆಐ ಚಂದ್ರಚೂಡ್‌ ಅವರು ಆಕೆಯನ್ನು ಸನ್ಮಾನಿಸುವ ವೇಳೆ ಹೇಳಿದರು. ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಮೂರ್ತಿಗಳು ಸಹಿ ಹಾಕಿರುವ ಭಾರತೀಯ ಸಂವಿಧಾನಕ್ಕೆ ಸಂಬಂಧಿಸಿದ ಮೂರು ಪುಸ್ತಕಗಳನ್ನು ಆಕೆಗೆ ನೀಡಿದರು. ಅಲ್ಲಿದ್ದ ನ್ಯಾಯಮೂರ್ತಿಗಳು ಪ್ರಜ್ಞಾಗೆ ಶುಭ ಹಾರೈಸಿದರು.  

ADVERTISEMENT

ಪ್ರಜ್ಞಾ ಪೋಷಕರಿಗೂ ಶಾಲುಗಳನ್ನು ಹೊದಿಸಿ ಚಂದ್ರಚೂಡ್‌ ಅವರು ಗೌರವಿಸಿದರು. ಈ ವೇಳೆ ಅವರಿಬ್ಬರ ಕಣ್ಣುಗಳಲ್ಲಿ ಹೆಮ್ಮೆಯ ಮಿಂಚು ಇತ್ತು. 

ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಪ್ರಜ್ಞಾ, ಸಿಜೆಐ ಚಂದ್ರಚೂಡ್‌ ಅವರು ತಮಗೆ ಸ್ಫೂರ್ತಿ ಎಂದರು. ‘ಕೋ‌ರ್ಟ್‌ ಕಲಾಪಗಳು ನೇರ ಪ್ರಸಾರಗುವ ಕಾರಣ ಚಂದ್ರಚೂಡ್‌ ಅವರ ಮಾತುಗಳನ್ನು ಎಲ್ಲರೂ ಕೇಳಿಸಿಕೊಳ್ಳಬಹುದಾಗಿದೆ. ಅವರು ಯುವ ವಕೀಲರನ್ನು ಉತ್ತೇಜಿಸುತ್ತಾರೆ. ಅವರ ಮಾತುಗಳು ಮುತ್ತುಗಳಿದ್ದಂತೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.