ಶ್ರೀನಗರ:ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಿನ ಪ್ರಸಿದ್ಧ ಯಾತ್ರಾಸ್ಥಳ ಅಮರನಾಥದಲ್ಲಿ ಶುಕ್ರವಾರ ಸಂಜೆ 5.30ರ ಹೊತ್ತಿಗೆ ಮೇಘ ಸ್ಫೋಟವಾಗಿದ್ದು, ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 25ಕ್ಕೂ ಹೆಚ್ಚು ಡೇರೆಗಳು ನಾಶವಾಗಿವೆ. ಮೂರು ಸಾಮೂಹಿಕ ಭೋಜನಗೃಹಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇಘಸ್ಫೋಟದ ಬಳಿಕ ಭಾರಿ ಮಳೆ ಸುರಿದಿದೆ. ಮಳೆಯಿಂದಾಗಿ ಪ್ರವಾಹದಂತಹ ಸ್ಥಿತಿ ನಿರ್ಮಾಣವಾಗಿದೆ. ವೇಗವಾಗಿ ನುಗ್ಗಿದ ನೀರಿನಿಂದಾಗಿ ಡೇರೆಗಳು ಕೊಚ್ಚಿ ಹೋದವು.
ಪೊಲೀಸ್, ಸೇನೆ ಮತ್ತು ಇಂಡೊ–ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಆಘಾತ ವ್ಯಕ್ತಪಡಿಸಿದ್ದಾರೆ.ಜಮ್ಮು–ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಜತೆಗೂ ಪ್ರಧಾನಿ ಮಾತನಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಮನೋಜ್ ಸಿನ್ಹಾ ಅವರ ಜತೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ತ್ವರಿತ ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್‌ಡಿಆರ್‌ಎಫ್), ಕೇಂದ್ರ ಮೀಸಲು ಪೊಲೀಸ್ ಪಡೆ, ಗಡಿ ಭದ್ರತಾ ಪಡೆಯ ಸಿಬ್ಬಂದಿಯನ್ನು ಕಳುಹಿಸಲಾಗಿದೆ ಎಂದು ಶಾ ಅವರು ಟ್ವೀಟ್ ಮಾಡಿದ್ದಾರೆ. ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಯಾತ್ರಿಕರಿಗೆ ಎಲ್ಲ ನೆರವು ನೀಡಲಾಗುವುದು ಶಾ ಹೇಳಿದ್ದಾರೆ.
ತೀರ್ಥಯಾತ್ರಿಕರ 10 ಮೃತದೇಹಗಳು ದೊರೆತಿವೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.ಗಾಯಗೊಂಡವರನ್ನು ಹೆಲಿಕಾಪ್ಟರ್‌ಗಳ ಮೂಲಕ ಚಿಕಿತ್ಸೆಗೆ ಕರೆತರಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕಾಶ್ಮೀರ ಪೊಲೀಸ್ ಮಹಾ ನಿರೀಕ್ಷಕ ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಅಮರನಾಥ ಗುಹೆಯ ಮೇಲ್ಭಾಗ ಮತ್ತು ಬದಿಗಳಿಂದ ನೀರು ನುಗ್ಗಿದೆ ಎಂದು ಐಟಿಬಿಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷ ಅಮರನಾಥ ಯಾತ್ರೆ ಸ್ಥಗಿತವಾಗಿತ್ತು. ಈ ವರ್ಷ ಜೂನ್ 30ರಂದು ಯಾತ್ರೆ ಆರಂಭವಾಗಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಈ ವಾರದ ಆರಂಭದಲ್ಲಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಈ ವರ್ಷ ಈ
ವರೆಗೆ 72 ಸಾವಿರಕ್ಕೂ ಹೆಚ್ಚು ಮಂದಿ ಗುಹೆಯಲ್ಲಿ ಪೂಜೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.