ADVERTISEMENT

ವಕ್ಫ್ ಮಂಡಳಿಗಳು ಭೂ ಅತಿಕ್ರಮಣ ಮಾಡಿವೆ, ಅದೊಂದು ಮಾಫಿಯಾ: ಯೋಗಿ

ಪಿಟಿಐ
Published 3 ಏಪ್ರಿಲ್ 2025, 10:05 IST
Last Updated 3 ಏಪ್ರಿಲ್ 2025, 10:05 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಪ್ರಯಾಗ್‌ರಾಜ್: ವಕ್ಫ್ ಮಂಡಳಿಗಳ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಕ್ಫ್ ಮಂಡಳಿಗಳಿಂದ ಭೂ ಅತಿಕ್ರಮಣವಾಗಿದೆ ಎಂದು ಆರೋಪಿಸಿರುವ ಅವರು, ಸಾರ್ವಜನಿಕ ಮತ್ತು ಐತಿಹಾಸಿಕ ಸ್ಥಳಗಳ ಮೇಲಿನ ಅದರ ನಿರಂಕುಶ ಹಕ್ಕುಗಳನ್ನು ಇನ್ನುಮುಂದೆ ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ವಕ್ಫ್ ಮಂಡಳಿಗಳು ನಗರಗಳಾದ್ಯಂತ ಭೂಮಿಗಳ ಮೇಲೆ ಆಧಾರರಹಿತ ಹಕ್ಕುಗಳನ್ನು ಸಾಧಿಸುತ್ತಿವೆ. ಕುಂಭಮೇಳದ ಸಿದ್ಧತೆಗಳ ಸಮಯದಲ್ಲಿಯೂ ಅವರು ಕಾರ್ಯಕ್ರಮ ಆಯೋಜಿಸಿದ್ದ ಭೂಮಿ ತಮಗೆ ಸೇರಿದ್ದು ಎಂದು ಘೋಷಿಸಿದ್ದರು. ಹೀಗಾಗಿ, ವಕ್ಫ್ ಮಂಡಳಿಯು ಭೂ ಮಾಫಿಯಾವಾಗಿ ಮಾರ್ಪಟ್ಟಿದೆಯೇ? ಎಂಬ ಪ್ರಶ್ನೆಯನ್ನು ನಾವು ಕೇಳಲೇಬೇಕಿದೆ ಎಂದಿದ್ದಾರೆ.

ತಮ್ಮ ಸರ್ಕಾರದ ಅಡಿಯಲ್ಲಿ, ಅಂತಹ ಅತಿಕ್ರಮಣಗಳನ್ನು ತೆರವು ಮಾಡಲಾಗಿದೆ. ಮಾಫಿಯಾಗಳನ್ನು ಉತ್ತರ ಪ್ರದೇಶದಿಂದ ಓಡಿಸಲಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ADVERTISEMENT

ನಿಶಾದ್ ರಾಜ್‌ಗೆ ಸಂಬಂಧಿಸಿದ ಪವಿತ್ರ ಭೂಮಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಕ್ಫ್ ಹೆಸರಿನಲ್ಲಿ ಅತಿಕ್ರಮಣಗಳನ್ನು ಮಾಡಲಾಗಿದೆ. ಆದರೆ, ಇದನ್ನು ಮುಂದುವರಿಸಲು ಬಿಡಲಾಗುವುದಿಲ್ಲ. ಅವರ ಆಕ್ಷೇಪಣೆಗಳ ಹೊರತಾಗಿಯೂ ಭವ್ಯ ಮತ್ತು ದೈವಿಕ ಕುಂಭಮೇಳವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಕ್ಫ್ ಮಂಡಳಿಯ ಅಕ್ರಮಗಳ ವಿರುದ್ಧ ಕ್ರಮ ಕೈಗೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಶ್ಲಾಘಿಸಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆ 2025 ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.

ರಾಜ್ಯವು ಇನ್ನು ಮುಂದೆ ಅಕ್ರಮವಾಗಿ ವಕ್ಫ್ ಮಂಡಳಿ ಹಕ್ಕು ಸಾಧಿಸುವುದನ್ನು ಸಹಿಸುವುದಿಲ್ಲ. ನಮಗೆ ರಾಷ್ಟ್ರೀಯ ಹಿತಾಸಕ್ತಿ ಮೊದಲು ಎಂದು ಆದಿತ್ಯನಾಥ್ ಒತ್ತಿ ಹೇಳಿದ್ದಾರೆ.

ರಾಷ್ಟ್ರಕ್ಕೆ ನಿಷ್ಠರಾಗಿರುವವರು ಯಾವಾಗಲೂ ತಮ್ಮ ಮುಂದಿನ ಹಾದಿಯನ್ನು ಕಂಡುಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.