ADVERTISEMENT

ಜೈಲಿನಿಂದಲೇ ಎಎಪಿ ಸರ್ಕಾರದ ಆಡಳಿತ: ಮುಂದಿನ ವಾರದಿಂದ ಸಚಿವರ ಜತೆ ಕೇಜ್ರಿವಾಲ್ ಸಭೆ

ಪಿಟಿಐ
Published 15 ಏಪ್ರಿಲ್ 2024, 15:57 IST
Last Updated 15 ಏಪ್ರಿಲ್ 2024, 15:57 IST
<div class="paragraphs"><p>ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್</p></div>

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

   

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಪ್ರತಿ ವಾರ ಇಬ್ಬರು ಸಚಿವರನ್ನು ಜೈಲಿಗೆ ಕರೆಸಿಕೊಂಡು ಆ ಇಲಾಖೆಯಲ್ಲಿನ ಬೆಳವಣಿಗೆಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಎಎಪಿಯ ರಾಜ್ಯಸಭೆ ಸದಸ್ಯ ಸಂದೀಪ್ ಪಾಠಕ್ ತಿಳಿಸಿದ್ದಾರೆ. 

ತಿಹಾರ್ ಜೈಲಿನಲ್ಲಿರುವ ಅರವಿಂದ ಕೇಜ್ರಿವಾಲ್ ಅವರನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರೊಂದಿಗೆ ಸಂಸದ ಪಾಠಕ್ ಅವರೂ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದರು. 

ADVERTISEMENT

ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಯಲ್ಲಿ ಯಾವೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂಬ ಬಗ್ಗೆ ತಿಳಿಯಲು ಸಚಿವರ ಜೊತೆ ಸಭೆ ನಡೆಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಮುಂದಿನ ವಾರದಿಂದ ಪ್ರತಿ ವಾರ ಇಬ್ಬರು ಸಚಿವರನ್ನು ಜೈಲಿಗೆ ಕರೆಸಿಕೊಂಡು ಆ ಇಲಾಖೆಯಲ್ಲಿ ನಡೆದ ಅಭಿವೃದ್ಧಿ ಬಗ್ಗೆ ಚರ್ಚಿಸಲಿದ್ದಾರೆ. ಜೊತೆಗೆ ಯಾವೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಲಹೆ ಮತ್ತು ಸೂಚನೆಗಳನ್ನು ಮುಖ್ಯಮಂತ್ರಿಗಳು ನೀಡಲಿದ್ದಾರೆ’ ಎಂದು ತಿಳಿಸಿದರು.  

ಇದಕ್ಕೆ ಅಗತ್ಯವಿರುವ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುವುದು. ಈ ಮೂಲಕ ಸಮಂಜಸವಾದ ಮಾದರಿಯಲ್ಲಿ ಜೈಲಿನಿಂದಲೇ ಸರ್ಕಾರ ಕಾರ್ಯ ನಿರ್ವಹಿಸಲಿದೆ. ಶಾಸಕರು ಜನರ ಬಳಿಗೆ ತೆರಳಿ, ಅವರ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ಆಲಿಸಬೇಕು. ಜನರು ಎದುರಿಸುತ್ತಿರುವ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಶಾಸಕರು ಮುಂದಾಗಬೇಕು. ತಮ್ಮ ಅನುಪಸ್ಥಿತಿ ಜನರಿಗೆ ಕಾಡದಂತೆ ಶಾಸಕರು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಕೇಜ್ರಿವಾಲ್‌ ಸೂಚಿಸಿದ್ದಾರೆ. 

‘ರಾಜಕೀಯಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕುವಂತಿಲ್ಲ’
ದೆಹಲಿ ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಮಾರ್ಚ್ 21ರಂದು ಬಂಧನವಾಗಿರುವ ಕೇಜ್ರಿವಾಲ್ ಅವರನ್ನು ತಿಹಾರ್ ಕಾರಾಗೃಹದಲ್ಲಿಡಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಯು ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಗೆ ಸಹಿ ಹಾಕುವಂತಿಲ್ಲ ಎಂಬ ನಿಯಮವಿದೆ.  ಈ ಕುರಿತು ಪಿಟಿಐ ಸುದ್ದಿ ಸಂಸ್ಥೆಯ ಸಂಪಾದಕರ ಜೊತೆಗಿನ ಸಂವಾದದಲ್ಲಿ ಪ್ರತಿಕ್ರಿಯಿಸಿದ ಡಿಜಿ (ಕಾರಾಗೃಹ) ಸಂಜಯ್ ಬನಿವಾಲ್ ‘ನ್ಯಾಯಾಂಗ ಬಂಧನಲ್ಲಿರುವ ವ್ಯಕ್ತಿಯು ಒಂದು ಕಾನೂನು ಪತ್ರಗಳು ಅಥವಾ ದೂರಿನ ಪ್ರತಿಗಳು ಮತ್ತು ರಾಜಕೀಯೇತರ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಬಹುದು. ಅಥವಾ ಕುಟುಂಬಸ್ಥರಿಗೆ ಬರೆದ ಪತ್ರ ಮತ್ತು ಆಸ್ತಿಗೆ ಸಂಬಂಧಿಸಿದ ಪತ್ರಗಳಿಗೆ ಮಾತ್ರ ಸಹಿಹಾಕಬಹುದಾಗಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.