ADVERTISEMENT

ನಾಯಕತ್ವ ಬದಲಾವಣೆ ಊಹಾಪೋಹ: ಉತ್ತರಾಖಂಡ ಸಿಎಂ ದೆಹಲಿಗೆ ದೌಡು

ಪಿಟಿಐ
Published 8 ಮಾರ್ಚ್ 2021, 10:41 IST
Last Updated 8 ಮಾರ್ಚ್ 2021, 10:41 IST
ತ್ರಿವೇಂದ್ರ ಸಿಂಗ್ ರಾವತ್‌(ಸಾಂದರ್ಭಿಕ ಚಿತ್ರ)
ತ್ರಿವೇಂದ್ರ ಸಿಂಗ್ ರಾವತ್‌(ಸಾಂದರ್ಭಿಕ ಚಿತ್ರ)   

ಡೆಹ್ರಾಡೂನ್: ಉತ್ತರಾಖಂಡ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಹೆಚ್ಚುತ್ತಿರುವ ಊಹಾಪೋಹಗಳ ನಡುವೆ ‌ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಸೋಮವಾರ ದೆಹಲಿಗೆ ತೆರಳಿದ್ದಾರೆ.

ರಾವತ್ ಅವರು ದೆಹಲಿಗೆ ಹೋಗಿರುವುದನ್ನು ದೃಢಪಡಿಸಿರುವ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ‘ಇದು ಮುಖ್ಯಮಂತ್ರಿಯವರ ವಾಡಿಕೆಯ ಪ್ರವಾಸ‘ ಎಂದು ಹೇಳಿದರು.

ಶನಿವಾರ ಇಲ್ಲಿ ಕೇಂದ್ರ ವೀಕ್ಷಕರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಬಿಜೆಪಿ ಪ್ರಮುಖ ಸಮಿತಿಯ ಸಭೆ ನಡೆದ ನಂತರ ಪಕ್ಷದ ಹೈಕಮಾಂಡ್ ರಾವತ್ ಅವರನ್ನು ‘ಹೆಚ್ಚಿನ ಚರ್ಚೆಗಾಗಿ‘ ದೆಹಲಿಗೆ ಬರುವಂತೆ ಸೂಚಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ADVERTISEMENT

ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಬಿಜೆಪಿ ಮುಖಂಡ ಬನ್ಸಿಧರ್ ಭಗತ್, ‘ರಾಜ್ಯದಲ್ಲಿ ಯಾವುದೇ ನಾಯಕತ್ವ ಬದಲಾವಣೆಯ ಸಾಧ್ಯತೆ ಇಲ್ಲ. ಶನಿವಾರ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ನಾಲ್ಕು ವರ್ಷಗಳನ್ನು ಪೂರೈಸಿರುವ ರಾವತ್ ಸರ್ಕಾರದ ಕೆಲವೊಂದು ಘಟನೆಗಳ ಕುರಿತು ಚರ್ಚಿಸಲಾಗಿದೆ' ಎಂದು ತಿಳಿಸಿದ್ದಾರೆ.

ರಾವತ್ ಅವರು ಸೋಮವಾರ ಗೈರ್‌ಸೈನ್ ಮತ್ತು ಡೆಹ್ರಾಡೂನ್‌ನ್‌ಲ್ಲಿ ಹಲವಾರು ಕಾರ್ಯಕ್ರಮಗಳಿಗೆ ಹಾಜರಾಗಬೇಕಿತ್ತು. ದೆಹಲಿ ಬಿಜೆಪಿ ಕಚೇರಿಯಿಂದ ಕರೆ ಬಂದ ನಂತರ ಅವೆಲ್ಲವನ್ನೂ ರದ್ದುಗೊಳಿಸಬೇಕಾಯಿತು.

‘ಸಂಪುಟ ವಿಸ್ತರಣೆ ವಿಳಂಬದಿಂದಾಗಿ ಪಕ್ಷದ ಶಾಸಕರಲ್ಲಿ ರಾವತ್ ವಿರುದ್ಧ ತೀವ್ರ ಅಸಮಾಧಾನ ಭುಗಿಲೇಳಲು ಕಾರಣವಾಗಿತ್ತು. ನಂತರ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಮನ್ ಸಿಂಗ್ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ದುಶ್ಯಂತ್ ಕುಮಾರ್ ಗೌತಮ್ ನೇತೃತ್ವದಲ್ಲಿ ಶನಿವಾರ ಬಿಜೆಪಿ ಪ್ರಮುಖರ ಸಭೆ ನಡೆದ ನಂತರ ನಾಯಕತ್ವ ಬದಲಾವಣೆ ಬಗ್ಗೆ ಊಹಾಪೋಹಗಳು ಅಧಿಕಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.