ರೇಖಾ ಗುಪ್ತಾ
-ಪಿಟಿಐ ಚಿತ್ರ
ನವದೆಹಲಿ: ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ದೆಹಲಿ ಸರ್ಕಾರವು ರಾಷ್ಟ್ರ ರಾಜಧಾನಿಯ ಇತಿಹಾಸ, ಸಂಸ್ಕೃತಿ, ಅಭಿವೃದ್ಧಿ ಮತ್ತು ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಅಧಿಕೃತ ಲೋಗೊವನ್ನು ಅಂತಿಮಗೊಳಿಸಲು ಸಮಿತಿಯೊಂದನ್ನು ರಚಿಸಿದೆ.
ರೇಖಾ ಗುಪ್ತಾ ಅವರು ಲೋಗೊ ಆಯ್ಕೆ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲು ತಜ್ಞರ ಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿಯು ವಿವಿಧ ವಿಶ್ವವಿದ್ಯಾಲಯಗಳ ತಜ್ಞರನ್ನು ಸಹ ಒಳಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 26ರವರೆಗೆ ‘ಮೈ ಗವ್.ಇನ್ (MyGov.in) ಪೋರ್ಟಲ್‌ನಲ್ಲಿ ಸರ್ಕಾರ ಸ್ಪರ್ಧೆಯ ಮೂಲಕ ಲೋಗೊ ವಿನ್ಯಾಸಗಳನ್ನು ಆಹ್ವಾನಿಸಿತ್ತು. ಇದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೇಶದಾದ್ಯಂತ 1,800ಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದಾರೆ.
ಸಾರ್ವಜನಿಕ ಆಡಳಿತ ಇಲಾಖೆಯ (ಜಿಎಡಿ) ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯು ಲೋಗೊ ವಿನ್ಯಾಸಗಳನ್ನು ಮೌಲ್ಯಮಾಪನ ಮಾಡುವ ಮೂಲಕ ಶಾರ್ಟ್‌ಲಿಸ್ಟ್ ಮಾಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಈ ಲೋಗೊ ದೆಹಲಿಯ ವಿಶಿಷ್ಟ ಗುರುತಿನ ಹೊಸ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳು, ತಾಂತ್ರಿಕ ಪ್ರಗತಿ, ಸರ್ಕಾರದ ಆಡಳಿತವನ್ನು ಪ್ರತಿಬಿಂಬಿಸುವುದರ ಜತೆಗೆ ನಾಗರಿಕರ ಭಾಗವಹಿಸುವಿಕೆಯನ್ನು ಎತ್ತಿ ತೋರಿಸುವ ಬ್ರ್ಯಾಂಡ್ ಆಗಿರುತ್ತದೆ’ ಎಂದು ಗುಪ್ತಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.