
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ
ಠಾಣೆ (ಪಿಟಿಐ): ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ್ ಮತ್ತು ಮಥಾಡಿ ನಾಯಕ ನರೇಂದ್ರ ಪಾಟೀಲ್ ಅವರಿಗೆ ಈ ಸಾಲಿನ ‘ಮರಾಠ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ಗುರುವಾರ ತಿಳಿಸಿದರು.
ಮರಾಠಾ ಸಮುದಾಯದ ಗಣ್ಯರಿಗೆ ಈ ಪ್ರಶಸ್ತಿಯನ್ನು ಪ್ರತಿವರ್ಷವೂ ನೀಡಲಾಗುತ್ತದೆ.
ಮರಾಠ ಕ್ರಾಂತಿ ಮೋರ್ಚಾ ಅಧ್ಯಕ್ಷ ರಮೇಶ್ ಅಂಬ್ರೆ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಫೆಬ್ರುವರಿ 19ರಂದು ನಡೆಯಲಿರುವ ಶಿವಾಜಿ ಜಯಂತಿಯಂದು ಥಾಣೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜರಾಂಗೆ ಅವರು ಸದ್ಯ ಜಲ್ನಾ ಜಿಲ್ಲೆಯಲ್ಲಿ ನಿರಶನ ಕೈಗೊಂಡಿದ್ದಾರೆ. ಅವರಿಗೆ ಆನ್‌ಲೈನ್ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಕೋರಿ ಜರಾಂಗೆ ಅವರು ನಡೆಸುತ್ತಿರುವ ಹೋರಾಟದ ಕುರಿತು ಕೇಳಿದ ಪ್ರಶ್ನೆಗೆ, ‘ಸರ್ಕಾರವು ಫೆಬ್ರುವರಿ 20ರಂದು ವಿಶೇಷ ಅಧಿವೇಶನ ಕರೆದಿದೆ. ಅಧಿವೇಶನದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಕಾದುನೋಡಬೇಕಿದೆ’ ಎಂದು ಅಂಬ್ರೆ ಹೇಳಿದರು.
ಪ್ರಶಸ್ತಿಗೆ ಶಿಂದೆ ಅವರನ್ನು ಆಯ್ಕೆ ಮಾಡಿರುವ ಕುರಿತ ಪ್ರಶ್ನೆಗೆ, ಶಿಂದೆ ಅವರು ಮರಾಠರು ಎಂಬ ಕಾರಣಕ್ಕಾಗಿ ಪ್ರಶಸ್ತಿ ನೀಡಲಾಗಿದೆ. ಮುಖ್ಯಮಂತ್ರಿ ಎಂಬ ಕಾರಣಕ್ಕಾಗಿ ಅಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.