ADVERTISEMENT

ಜಾರ್ಖಂಡ್‌ | ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಕುಸಿತ: ಮೃತರ ಸಂಖ್ಯೆ 4ಕ್ಕೆ ಏರಿಕೆ

ಪಿಟಿಐ
Published 5 ಜುಲೈ 2025, 13:03 IST
Last Updated 5 ಜುಲೈ 2025, 13:03 IST
   

ರಾಮಗಢ(ಜಾರ್ಖಂಡ್): ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ವೇಳೆ ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಕರ್ಮಾ ಪ್ರದೇಶದಲ್ಲಿ ಇಂದು (ಶನಿವಾರ) ಮುಂಜಾನೆ ಈ ಘಟನೆ ನಡೆದಿದೆ. ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ವೇಳೆ ಗಣಿಯ ಒಂದು ಭಾಗ ಕುಸಿದಿದ್ದು, ಅವಶೇಷಗಳಡಿ ಹಲವರು ಸಿಲುಕಿಕೊಂಡಿರು ಶಂಕೆಯಿದೆ ಎಂದು ಅವರು ತಿಳಿಸಿದ್ದಾರೆ.

ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಸ್‌ಡಿಪಿಒ ಪರಮೇಶ್ವರ ಪ್ರಸಾದ್‌ ತಿಳಿಸಿದ್ದಾರೆ.

ADVERTISEMENT

ಸ್ಥಳಕ್ಕೆ ಪೊಲೀಸರು ಬರುವುದಕ್ಕೆ ಮುನ್ನವೇ ಮೂರು ಮೃತದೇಹಗಳನ್ನು ಸ್ಥಳೀಯರು ತೆಗೆದುಕೊಂಡು ಹೋಗಿದ್ದಾರೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಗಣಿಯ ಕುಸಿದ ಭಾಗದಲ್ಲಿ ಮತ್ತಷ್ಟು ಕಾರ್ಮಿಕರು ಸಿಲುಕಿರಬಹುದು ಎಂದು ಕುಜು ಪೊಲೀಸ್‌ ಹೊರ ಠಾಣೆಯ ಉಸ್ತುವಾರಿ ಅಶುತೋಷ್‌ ಕುಮಾರ್‌ ಸಿಂಗ್‌ ಶಂಕೆ ವ್ಯಕ್ತಪಡಿದ್ದಾರೆ.

‘ಅಕ್ರಮವಾಗಿ ಇಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಇದರಲ್ಲಿ ಗ್ರಾಮದ ಹಲವರು ಭಾಗಿಯಾಗಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

‘ತನಿಖೆಗಾಗಿ ತಂಡವೊಂದನ್ನು ಸ್ಥಳಕ್ಕೆ ಕಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸೆಂಟ್ರಲ್‌ ಕೋಲ್‌ಫೀಲ್ಡ್‌ ಲಿಮಿಟೆಡ್‌ (ಸಿಸಿಎಲ್‌) ಸ್ಥಗಿತಗೊಳಿಸಿದ್ದ ಕಲ್ಲಿದ್ದಲು ಗಣಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಅಜಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಘಟನೆಯನ್ನು ಖಂಡಿಸಿ ಗ್ರಾಮಸ್ಥರು ಸಿಸಿಎಲ್‌ನ ಕರಮಾ ಯೋಜನಾ ಕಚೇರಿ ಬಳಿಪ್ರತಿಭಟಿಸಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಾಬುಲಾಲ್‌ ಮರಾಂಡಿ ಅವರು ಉನ್ನತಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.