ಮುಂಬೈ: ದೇಶದ ‘ಕರಾವಳಿ ನಿಯಂತ್ರಣ ವಲಯ’ದ(ಸಿಆರ್‌ಜೆಡ್) ಮಿತಿಯನ್ನು ಕಡಿತಗೊಳಿಸುವ ನೀತಿ ಆಯೋಗದ ಪ್ರಸ್ತಾವಕ್ಕೆ ಪರಿಸರ ಪರ ಗುಂಪುಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಪ್ರಧಾನಮಂತ್ರಿ ಕಚೇರಿಯು (ಪಿಎಂಒ) ಮಧ್ಯಪ್ರವೇಶಿಸಿದ್ದು, ಪರಿಸರ ಪರ ಸಂಘಟನೆಗಳು ಎತ್ತಿರುವ ಆಕ್ಷೇಪಗಳ ಕುರಿತು ಗಮನ ಹರಿಸುವಂತೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸೂಚಿಸಿದೆ.
ಈ ವಿಚಾರವನ್ನು ಸಚಿವಾಲಯದ ಸಿಆರ್‌ಜೆಡ್ ಪರಿಣಾಮ ಮೌಲ್ಯಮಾಪನ ವಿಭಾಗಕ್ಕೆ ಶಿಫಾರಸು ಮಾಡಿರುವುದು ಪಿಎಂಒ ಪೋರ್ಟಲ್‌ನಿಂದ ತಿಳಿದುಬರುತ್ತದೆ.
ಕರಾವಳಿ ನಿಯಂತ್ರಣ ವಲಯದ ಮಿತಿಯನ್ನು ಈಗಿನ 500 ಮೀಟರ್‌ನಿಂದ 200 ಮೀಟರ್‌ಗೆ ಕಡಿತಗೊಳಿಸುವಂತೆ ನೀತಿ ಆಯೋಗ ಪ್ರಸ್ತಾವ ಮುಂದಿಟ್ಟಿದೆ. ಮುಂಬೈ ಮೂಲದ ಪರಿಸರ ಸಂರಕ್ಷಣೆಗೆ ಹೋರಾಡುವ ಸಂಘಟನೆಗಳಾದ ‘ನ್ಯಾಟ್‌ಕನೆಕ್ಟ್ ಫೌಂಡೇಷನ್’ ಹಾಗೂ ‘ಸಾಗರ ಶಕ್ತಿ’, ಈ ಪ್ರಸ್ತಾವಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿವೆ.
‘ನೀತಿ ಆಯೋಗದ ಈ ಶಿಫಾರಸು ದೇಶದ ಕರಾವಳಿಗಳ ಪರಿಸರಕ್ಕೆ ಮಾರಕ’ ಎಂದು ಹೇಳಿರುವ ಈ ಸಂಘಟನೆಗಳು, ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯಪ್ರವೇಶಿಸಬೇಕು ಹಾಗೂ ಆಯೋಗದ ಶಿಫಾರಸನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿವೆ.
‘ಕರಾವಳಿ ನಿಯಂತ್ರಣ ವಲಯದ ಮಿತಿಯು ಸದ್ಯ 'ಹೈ ಟೈಡ್ ಲೈನ್'(ಎಚ್‌ಟಿಎಲ್)ನಿಂದ 500 ಮೀಟರ್ ಇದೆ. ಇದನ್ನು 200 ಮೀಟರ್‌ಗೆ ಕಡಿತಗೊಳಿಸಬೇಕು’ ಎಂದು ನೀತಿ ಆಯೋಗದ ಸದಸ್ಯ ರಾಜೀವ್ ಗೌಬಾ ನೇತೃತ್ವದ ಉನ್ನತಾಧಿಕಾರ ಸಮಿತಿಯು ಸಲಹೆ ನೀಡಿತ್ತು.
‘ಈಗ ಇರುವ ಸಿಆರ್‌ಜೆಡ್ ಮಿತಿಯು ಅಗತ್ಯಕ್ಕಿಂತ ಹೆಚ್ಚು ನಿರ್ಬಂಧ ಹೇರುತ್ತದೆ. ಸಣ್ಣ ಪ್ರಮಾಣದ ಪ್ರವಾಸೋದ್ಯಮ, ಮೀನುಗಾರಿಕೆ, ಹೋಂ ಸ್ಟೇಗಳ ಕಾರ್ಯಾಚರಣೆ ಹಾಗೂ ಕರಾವಳಿ ಉದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳುವುದಕ್ಕೆ ಇದರಿಂದ ಅಡ್ಡಿ ಉಂಟಾಗಿದೆ’ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.
ಸಾಗರ ತೀರ ಸಮೀಪ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ನೀಡುವ ಮೂಲಕ ಕರಾವಳಿ ನಿಯಂತ್ರಣ ವಲಯದ ನಿಯಮಗಳನ್ನು ಈಗಾಗಲೇ ದುರ್ಬಲಗೊಳಿಸಲಾಗಿದೆಬಿ.ಎನ್.ಕುಮಾರ್ ನ್ಯಾಟ್‌ಕನೆಕ್ಟ್ ಫೌಂಡೇಷನ್ ನಿರ್ದೇಶಕ
ಕರಾವಳಿ ನಿಯಂತ್ರಣ ವಲಯ ಮಿತಿಯನ್ನು ಕಡಿತ ಮಾಡುವುದರಿಂದ ಸಮುದ್ರತೀರದ ಸಮೀಪ ಅಪಾಯಕಾರಿ ಎನಿಸುವಷ್ಟು ವಿಪರೀತ ನಿರ್ಮಾಣ ಕಾರ್ಯಕ್ಕೆ ಅವಕಾಶ ನೀಡಿದಂತಾಗಲಿದೆ ಎಂದು ನ್ಯಾಟ್‌ಕನೆಕ್ಟ್ ಫೌಂಡೇಷನ್ ನಿರ್ದೇಶಕ ಬಿ.ಎನ್.ಕುಮಾರ್ ಹೇಳುತ್ತಾರೆ. ‘ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟದಲ್ಲಿ ಏರಿಕೆ ಕಂಡುಬರುತ್ತಿದೆ. ಜಗತ್ತಿನ ಹಲವು ನಗರಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಕರಾವಳಿಯಿಂದ ದೂರವೇ ಕೈಗೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಗರ ತೀರದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಅನುಮತಿ ನೀಡುವುದು ಸರಿಯಲ್ಲ’ ಎಂದು ಪ್ರತಿಪಾದಿಸುತ್ತಾರೆ.
‘ಭಾರತದ ಒಂಬತ್ತು ರಾಜ್ಯಗಳ 113 ನಗರಗಳು 2050ರ ವೇಳೆ ಭಾಗಶಃ ಮುಳುಗಡೆಯಾಗಲಿವೆ ಎಂದು ಭಾರತ ಅಭಿವೃದ್ಧಿ ವರದಿಯಲ್ಲಿ ಎಚ್ಚರಿಸಲಾಗಿದೆ’ ಎಂದು ವಿವರಿಸುತ್ತಾರೆ. ‘ಕರ್ನಾಟಕದ ಕರಾವಳಿ ಪೈಕಿ ಶೇ 23.7ರಷ್ಟು ಪ್ರದೇಶ ಸವೆಯುತ್ತಿದೆ. ದೇಶದ ಕರಾವಳಿಯ ಶೇ33.6ರಷ್ಟು ಪ್ರದೇಶ ಸವೆಯುವ ಅಪಾಯ ಎದುರಿಸುತ್ತಿದೆ ಎಂಬುದಾಗಿ ಸಂಸತ್‌ನಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಮಂಡಿಸಿದ ವರದಿಯಲ್ಲಿ ಹೇಳಲಾಗಿದೆ’ ಎಂದು ಕುಮಾರ್ ಹೇಳುತ್ತಾರೆ.
‘
‘ಮೀನುಗಾರರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಸಿಆರ್‌ಜೆಡ್ ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಂಡುಬಂಂದರೂ, ರಿಯಲ್ ಎಸ್ಟೇಟ್ ಚಟುವಟಿಕೆಗಳ ವಿಸ್ತರಣೆಗೆ ಕರಾವಳಿಯನ್ನು ಮುಕ್ತಗೊಳಿಸುವ ಹುನ್ನಾರ ಇದರಲ್ಲಿ ಅಡಗಿದೆ’ ಎಂದು ‘ಸಾಗರ ಶಕ್ತಿ’ ನಿರ್ದೇಶಕ ನಂದಕುಮಾರ್ ಪವಾರ್ ಹೇಳುತ್ತಾರೆ.
‘ಕರಾವಳಿ ಸಂರಕ್ಷಣೆ ಹಾಗೂ ವಿಪತ್ತುಗಳನ್ನು ಎದುರಿಸಲು ನಾವು ಸನ್ನದ್ಧರಾಗಿರಬೇಕು. ಇದಕ್ಕಾಗಿ ನಾವು ಹೂಡಿಕೆ ಹೆಚ್ಚಳ ಮಾಡಬೇಕಾದ್ದು ಇಂದಿನ ತುರ್ತು. ಆದರೆ, ಸಮುದ್ರಕ್ಕೆ ಮತ್ತಷ್ಟು ಸನಿಹದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಒದಗಿಸಲು ಮುಂದಾಗಿರುವುದು ಆಘಾತಕಾರಿ’ ಎಂದು ಪವಾರ್ ಹೇಳುತ್ತಾರೆ.
‘ನೀತಿ ಆಯೋಗದ ಶಿಫಾರಸು ಅನುಷ್ಠಾನ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಸ್ವತಂತ್ರ ತಜ್ಞರು ಹಾಗೂ ಕರಾವಳಿಯಲ್ಲಿ ವಾಸಿಸುವವರ ಜೊತೆ ಕೇಂದ್ರ ಸರ್ಕಾರ ವ್ಯಾಪಕ ಸಮಾಲೋಚನೆ ನಡೆಸಬೇಕು’ ಎಂದೂ ಅವರು ಆಗ್ರಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.