ಬಂಧನ ( ಸಾಂಕೇತಿಕ ಚಿತ್ರ)
ನವದೆಹಲಿ: ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ದೆಹಲಿಯಲ್ಲಿ ಬಂಧಿಸಲಾಗಿದ್ದು, ಅವರಿಂದ ₹1.5 ಕೋಟಿ ಮೌಲ್ಯದ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಒಬ್ಬ ಆಫ್ರಿಕಾದ ಪ್ರಜೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
40 ವರ್ಷದ ಆಫ್ರಿಕನ್ ಪ್ರಜೆ ಯಾವೊ ಮತ್ತು ಬಿಹಾರ ಮೂಲದ ಬಿಕಾಸ್ (23) ಎಂಬವನನ್ನು ಬಂಧಿಸಲಾಗಿದೆ. ಅವರ ಬಳಿಯಿಂದ ಸುಮಾರು ₹ 1.5 ಕೋಟಿ ಮೌಲ್ಯದ 141.9 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇಬ್ಬರೂ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಾದ್ಯಂತ ಸಕ್ರಿಯವಾಗಿ ಕೊಕೇನ್ ಸರಬರಾಜು ಮಾಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಭಿಕಾಜಿ ಕಾಮಾ ಪ್ಲೇಸ್ ಬಳಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ನೈಋತ್ಯ) ಆಕಾಂಕ್ಷಾ ಯಾದವ್ ಹೇಳಿದ್ದಾರೆ.
ವರ್ತುಲ ರಸ್ತೆಯ ಬಸ್ ನಿಲ್ದಾಣದ ಬಳಿ ಅವರನ್ನು ಬಂಧಿಸಲಾಗಿದೆ. ಪೊಲೀಸರ ತಂಡವು ಅವರಿಂದ ಕೊಕೇನ್ ವಶಪಡಿಸಿಕೊಂಡಿದೆ. ಘಟನೆ ಸಂಬಂಧ ಎಫ್ಐಆರ್ ದಾಖಲಿಸಿ, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಯಾವೋ 2018 ರಲ್ಲಿ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಆಗಮಿಸಿ, ಅವಧಿ ಮುಗಿದ ನಂತರ ಅಕ್ರಮವಾಗಿ ಉಳಿದುಕೊಂಡಿದ್ದ. ತನ್ನ ಖರ್ಚುಗಳನ್ನು ನಿಭಾಯಿಸಲು ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಕೊಕೇನ್ ಮಾರಾಟ ಮಾಡುತ್ತಿದ್ದ, ಬೇಗನೇ ದೊಡ್ಡ ಪ್ರಮಾಣದ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಾವೋನನ್ನು ಈ ಹಿಂದೆ ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ಗುರುಗ್ರಾಮ್‌ನಲ್ಲಿ ಬಂಧಿಸಿ ಭೋಂಡ್ಸಿ ಜೈಲಿನಲ್ಲಿ ಇರಿಸಲಾಗಿತ್ತು. ಆ ವೇಳೆ ಜೈಲಿನಲ್ಲಿದ್ದ ಬಿಕಾಸ್‌ನ ಪರಿಚಯವಾಗಿದೆ. ಬಿಡುಗಡೆಯಾದ ಬಳಿಕ, ಇಬ್ಬರೂ ಒಟ್ಟು ಸೇರಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.