ADVERTISEMENT

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಜಾ ಪ್ರಕರಣ: ದಾಖಲೆ ಬಹಿರಂಗಕ್ಕೆ ಖರ್ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 9:04 IST
Last Updated 15 ಜನವರಿ 2019, 9:04 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಅಲೋಕ್‌ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ ವಿಚಾರದಲ್ಲಿ ಏಕೈಕ ಭಿನ್ನ ದನಿ ಎನಿಸಿದ್ದ ಮಲ್ಲಿಕಾರ್ಜುನ ಖರ್ಗೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಜ.10ರ ಸಭೆಯ ನಡಾವಳಿಗಳನ್ನು ಬಹಿರಂಗಪಡಿಸಿ. ವರ್ಮಾ ಅವರು ಹೊರನಡೆದ ಬಗ್ಗೆಜನರೇ ತಮ್ಮ ಅಭಿಪ್ರಾಯ ರೂಪಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

ವರ್ಮಾ ಅವರು ಹೊರನಡೆದ ನಂತರ ಎಂ.ನಾಗೇಶ್ವರಾವ್ ಅವರನ್ನು ಮಧ್ಯಂತರ ನಿರ್ದೇಶಕರನ್ನಾಗಿ ನೇಮಿಸಿದ ಕ್ರಮವನ್ನೂ ಖರ್ಗೆ ಪ್ರಶ್ನಿಸಿದ್ದಾರೆ. ‘ಈ ನೇಮಕಾತಿಯು ಕಾನೂನುಬದ್ಧವಾಗಿಲ್ಲ. ಮಾತ್ರವಲ್ಲ, ಆಯ್ಕೆ ಸಮಿತಿಯ ಅನುಮೋದನೆಯನ್ನೂ ಪಡೆದುಕೊಂಡಿಲ್ಲ’ ಎಂದು ಖರ್ಗೆ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಖರ್ಗೆ ಮತ್ತು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಸದಸ್ಯರಾಗಿದ್ದಾರೆ.

ಕಳೆದ ವಾರ ನಡೆದ ಸಭೆಯಲ್ಲಿ ಮುಖ್ಯನ್ಯಾಯಮೂರ್ತಿಗಳು ತಮ್ಮ ಪರವಾಗಿ ನ್ಯಾಯಮೂರ್ತಿ ಎ.ಕೆ.ಸಿಕ್ರಿ ಅವರನ್ನು ಸಭೆಗೆ ಕಳಿಸಿದ್ದರು. ಈ ಸಭೆಯ ನಂತರ ವರ್ಮಾ ಅವರನ್ನು ಪದಚ್ಯುತಗೊಳಿಸಲಾಯಿತು. ವರ್ಮಾ ಅವರ ಪದಚ್ಯುತಿ ನಿರ್ಣಯದ ಪರವಾಗಿ ಪ್ರಧಾನಿ ಮೋದಿ ಮತ್ತು ನ್ಯಾಯಮೂರ್ತಿ ಸಿಕ್ರಿ ಮತ ಚಲಾಯಿಸಿದ್ದರು. ಈ ನಿರ್ಧಾರವನ್ನು ವಿರೋಧಿಸಿದ್ದರು.

ADVERTISEMENT

ಜ.10ರಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಸರ್ಕಾರ ಯಾರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಿಸಲಿದೆ ಎನ್ನುವ ವಿಚಾರ ಪ್ರಸ್ತಾಪವೇ ಆಗಲಿಲ್ಲ. ಆದರೆ ಅಷ್ಟೊತ್ತಿಗೆ ಇಂಥವರನ್ನೇ ಸಮಿತಿಗೆ ನೇಮಿಸಬೇಕು ಎಂದು ಸರ್ಕಾರ ತೀರ್ಮಾನಿಸಿಕೊಂಡಿತ್ತು ಎನಿಸುತ್ತದೆ. ಸರ್ಕಾರ ಇನ್ನಾದರೂ ಆಯ್ಕೆ ಸಮಿತಿ ಸಭೆ ನಡೆಸಿ, ಸಿಬಿಐಗೆ ಪೂರ್ಣಕಾಲೀನ ನಿರ್ದೇಶಕರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

‘ಸರ್ಕಾರದ ನಡವಳಿಕೆಗೆ ಗಮನಿಸಿದರೆ, ಸ್ವತಂತ್ರ ಸಿಬಿಐ ನಿರ್ದೇಶಕರ ಬಗ್ಗೆ ಹೆದರಿಕೆ ಇದ್ದಂತೆ ಭಾಸವಾಗುತ್ತದೆ. ಕೇಂದ್ರ ಜಾಗೃತ ಆಯೋಗದ (ಸಿವಿಸಿ) ವರದಿ, ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ವರದಿ ಮತ್ತು ಜ.10ರಂದು ನಡೆದ ಆಯ್ಕೆ ಸಮಿತಿ ಸಭೆಯ ನಡಾವಳಿಗಳನ್ನು ಬಹಿರಂಗಪಡಿಸುವ ಮೂಲಕ ಸರ್ಕಾರ ತನಗೆ ಅಂಟಿರುವ ಕಳಂಕ ತೊಳೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ವರ್ಮಾ ವಿರುದ್ಧ ಸಿವಿಸಿ ನಡೆಸಿದ ತನಿಖೆಯ ಉಸ್ತುವಾರಿಯನ್ನು ನಿವೃತ್ತ ನ್ಯಾಯಮೂರ್ತಿ ಪಟ್ನಾಯಕ್ ವಹಿಸಿದ್ದರು. ‘ಮಾಂಸ ರಫ್ತು ಉದ್ಯಮಿ ಮೊಯಿನ್ ಖುರೇಷಿ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಮಾ ವಿರುದ್ಧ ಸಿಬಿಐನ ಹೆಚ್ಚುವರಿ ನಿರ್ದೇಶಕರಾಗಿದ್ದ ರಾಕೇಶ್ ಆಸ್ತಾನಾ ಮಾಡಿದ್ದ ಆರೋಪಗಳನ್ನು ಯಾವುದೇ ಸಾಕ್ಷಿ ಪುಷ್ಟೀಕರಿಸಲಿಲ್ಲ’ ಎಂದು ಪಟ್ನಾಯಕ್ಹೇಳಿದ್ದರು.

‘ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಪ್ರಧಾನಿ ಮೋದಿ ನೇತೃತ್ವದ ಸಮಿತಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದು ಆತುರದ ನಿರ್ಧಾರವೆಂದು ತೋರುತ್ತದೆ’ಎಂದು ಅಭಿಪ್ರಾಯಪಟ್ಟಿದ್ದರು.

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.