ADVERTISEMENT

ಶಾಲಾ ಮಕ್ಕಳಲ್ಲಿ ಮೊಬೈಲ್‌ ಬಳಕೆ; ಸಂಪೂರ್ಣ ನಿಷೇಧ ಹೇರಿಕೆ ಅಸಾಧ್ಯ: ಹೈಕೋರ್ಟ್‌

ಪಿಟಿಐ
Published 4 ಮಾರ್ಚ್ 2025, 2:13 IST
Last Updated 4 ಮಾರ್ಚ್ 2025, 2:13 IST
ದೆಹಲಿ ಹೈಕೋರ್ಟ್‌ 
ದೆಹಲಿ ಹೈಕೋರ್ಟ್‌    

ನವದೆಹಲಿ: ಶಾಲಾ ಮಕ್ಕಳು ಮೊಬೈಲ್ ಫೋನ್‌ ಬಳಸುವುದನ್ನು ಸಂಪೂರ್ಣ ನಿಷೇಧಿಸುವುದು ‘ಅಪೇಕ್ಷಣೀಯವಲ್ಲ ಮತ್ತು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ’ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. 

ಮಕ್ಕಳು ಮೊಬೈಲ್‌ ಫೋನ್‌ ಬಳಸುವುದರ ಮೇಲೆ ನಿಯಂತ್ರಣ ಹೇರಬೇಕು ಎಂದು ನ್ಯಾಯಮೂರ್ತಿ ಅನೂಪ್‌ ಜೈರಾಮ್‌ ಭಂಭಾನಿ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಶಾಲಾ ಮಕ್ಕಳು ಮೊಬೈಲ್‌ ಫೋನ್‌ ಬಳಸುವುದನ್ನು ನಿಯಂತ್ರಿಸಲು ಕೆಲವು ಮಾರ್ಗಸೂಚಿಗಳನ್ನು ಹೈಕೋರ್ಟ್‌ ನಿಗದಿಪಡಿಸಿತು. ಜವಾಬ್ದಾರಿಯುತ ಆನ್‌ಲೈನ್ ನಡವಳಿಕೆ, ಡಿಜಿಟಲ್‌ ನಡವಳಿಕೆ ಮತ್ತು ಸ್ಮಾರ್ಟ್‌ಫೋನ್‌ಗಳ ಬಳಕೆಗೆ ಸಂಬಂಧಿಸಿದ ನೀತಿಸೂತ್ರಗಳ ಬಗ್ಗೆ ಶಾಲಾ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಹೇಳಿತು.

‘ಶೈಕ್ಷಣಿಕ ಮತ್ತು ಅದಕ್ಕೆ ಸಂಬಂಧಿತ ಕ್ಷೇತ್ರ
ಗಳಲ್ಲಿ ತಂತ್ರಜ್ಞಾನದ ಬಳಕೆಯ ವಿಚಾರದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಹಲವು ಬದಲಾವಣೆ ಉಂಟಾಗಿದೆ. ಆದ್ದರಿಂದ ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸುವುದು ಸಾಧ್ಯವಿಲ್ಲ’ ಎಂದು ಫೆ. 28ರಂದು ನೀಡಿದ ಆದೇಶದಲ್ಲಿ ಹೈಕೋರ್ಟ್‌ ಹೇಳಿದೆ.

ADVERTISEMENT

ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆ ಅಥವಾ ದುರುಪಯೋಗದಿಂದ ಹಾನಿಕಾರಕ ಪರಿಣಾಮಗಳು ಉಂಟಾಗುವುದನ್ನು ಹೊರತುಪಡಿಸಿ ದರೆ, ಈ ಸಾಧನವು ಪೋಷಕರು ಮತ್ತು ಮಕ್ಕಳು ಪರಸ್ಪರ ಸಂಪರ್ಕದಲ್ಲಿರಲು ಹಾಗೂ ಅವರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ನೆರವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿತು.

ವಿದ್ಯಾರ್ಥಿಗಳು ಶಾಲೆಗೆ ಸ್ಮಾರ್ಟ್‌ಫೋನ್‌ ಗಳನ್ನು ಕೊಂಡೊಯ್ಯುವುದನ್ನು ನಿರ್ಬಂಧಿಸಬಾರದು. ಆದರೆ, ಶಾಲೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ನಿಯಂತ್ರಿಸಬೇಕು ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿದೆ. ಶಾಲೆಯಲ್ಲಿ ಸ್ಮಾರ್ಟ್‌ಫೋನ್ ಬಳಸಿದ್ದಕ್ಕೆ ಶಿಸ್ತುಕ್ರಮ ಎದುರಿಸಿದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯೊಬ್ಬ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಆದೇಶ ಹೊರಡಿಸಿದೆ.

ಮಾರ್ಗಸೂಚಿಗಳು ಏನು?

l ಮಕ್ಕಳು ಶಾಲೆಗೆ ಮೊಬೈಲ್‌ ಫೋನ್‌ಗಳನ್ನು ತಂದರೆ ಅದನ್ನು ಒಂದು ಕಡೆ ಸುರಕ್ಷಿತವಾಗಿ ಇರಿಸಲು ವ್ಯವಸ್ಥೆ ಕಲ್ಪಿಸಬೇಕು. ಶಾಲೆಯಿಂದ ಮನೆಗೆ ಮರಳುವಾಗ ಅದನ್ನು ಹಿಂಪಡೆಯಬೇಕು 

l ಬೋಧನೆ, ಶಿಸ್ತು ಅಥವಾ ಒಟ್ಟಾರೆ ಶೈಕ್ಷಣಿಕ ವಾತಾವರಣಕ್ಕೆ ಸ್ಮಾರ್ಟ್‌ಫೋನ್‌ ಗಳು ಅಡ್ಡಿಯಾಗಬಾರದು. ಈ ದಿಸೆಯಲ್ಲಿ, ತರಗತಿಯಲ್ಲಿ ಅವುಗಳ ಬಳಕೆ‌ ನಿಷೇಧಿಸಬೇಕು

l ಶಾಲೆಯ ಆವರಣ ಮತ್ತು ಶಾಲಾ ವಾಹನಗಳಲ್ಲಿ ಕ್ಯಾಮೆರಾ ಮತ್ತು ವಿಡಿಯೊ ರೆಕಾರ್ಡಿಂಗ್‌ ಸೌಲಭ್ಯ ಬಳಸುವುದನ್ನು ನಿರ್ಬಂಧಿಸಬೇಕು

l ಸುರಕ್ಷತೆ ಮತ್ತು ಸಂವಹನದ ಉದ್ದೇಶಗಳಿಗಾಗಿ ಮಾತ್ರ ಬಳಕೆಗೆ ಅನುಮತಿಸಬೇಕು. ಮನರಂಜನೆಯ ಬಳಕೆಗೆ ಅನುಮತಿ ನೀಡಬಾರದು

l ಶಾಲೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ನಿಯಂತ್ರಿಸುವ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದ ನೀತಿ ಯನ್ನು ರೂಪಿಸುವಾಗ ಪೋಷಕರು, ಶಿಕ್ಷಕರು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು

l ನಿಯಮ ಉಲ್ಲಂಘಿಸುವ ವಿದ್ಯಾರ್ಥಿಗಳ ವಿರುದ್ಧ ತೀರಾ ಕಠಿಣ ಎನಿಸುವಂತಹ ಶಿಸ್ತುಕ್ರಮ ಜರುಗಿಸಬಾರದು

l ನಿಯಮ ಉಲ್ಲಂಘಿಸಿದ ವಿದ್ಯಾರ್ಥಿಗಳ ಸ್ಮಾರ್ಟ್‌ಫೋನ್‌ಗಳನ್ನು ನಿರ್ದಿಷ್ಟ ಅವಧಿಗೆ ಮುಟ್ಟುಗೋಲು ಹಾಕಿಕೊಳ್ಳುವ ಮತ್ತು ನಿರ್ದಿಷ್ಟ ದಿನಗಳವರೆಗೆ ಸ್ಮಾರ್ಟ್‌ಫೋನ್‌ ಶಾಲೆಗೆ ತರುವುದಕ್ಕೆ ನಿರ್ಬಂಧ ಹೇರುವುದನ್ನು ಶಿಸ್ತುಕ್ರಮವಾಗಿ ಪರಿಗಣಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.