ADVERTISEMENT

ಕೋವಿಡ್‌ ನಿರ್ವಹಣೆಯಲ್ಲಿ ವಿಫಲ: ದೆಹಲಿ ಸರ್ಕಾರವನ್ನು ಟೀಕಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 21:44 IST
Last Updated 30 ಏಪ್ರಿಲ್ 2021, 21:44 IST
.
.   

ನವದೆಹಲಿ: ಕೋವಿಡ್‌ ನಿರ್ವಹಣೆಯ ವಿಚಾರದಲ್ಲಿ ದೆಹಲಿ ಸರ್ಕಾರದ ಕ್ರಮವನ್ನು ಟೀಕಿಸಿರುವ ದೆಹಲಿ ಹೈಕೋರ್ಟ್‌, ‘ಸಮಸ್ಯೆ ಎಂದರೆ ನಮ್ಮಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ಇತರ ಸಿಬ್ಬಂದಿಯಾಗಲಿ, ಆಮ್ಲಜನಕ ಅಥವಾ ಔಷಧವಾಗಲಿ ಇಲ್ಲ. ರಾಜ್ಯವು ಸಂಪೂರ್ಣವಾಗಿ ವಿಫಲವಾಗಿರುವುದರ ಸಂಕೇತ ಇದು’ ಎಂದಿದೆ.

ಕೋವಿಡ್‌ನಿಂದ ಬಳಲುತ್ತಿರುವ ವಕೀಲರಿಗೆ ಪ್ರತ್ಯೇಕವಾದ ಚಿಕಿತ್ಸಾ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ದೆಹಲಿಯ ವಕೀಲರ ಸಂಘದ ಅಧ್ಯಕ್ಷ ರಮೇಶ್ ಗುಪ್ತಾ ಸೇರಿದಂತೆ ಇತರ ಕೆಲವು ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಪಿನ್ ಸಂಘಿ ಹಾಗೂ ರೇಖಾ ಪಲ್ಲಿ ಅವರನ್ನೊಳಗೊಂಡ ಪೀಠವು ಶುಕ್ರವಾರ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸೋಂಕಿತ ವಕೀಲರ ಸ್ಥಿತಿಯನ್ನು ವಿವರಿಸುತ್ತಾ, ವಿಚಾರಣೆಯ ಸಂದರ್ಭದಲ್ಲಿ ಕಣ್ಣೀರಿಟ್ಟ ಗುಪ್ತಾ ಅವರು, ‘ಈ ವಕೀಲರಿಗೆ ಸರಿಯಾದ ಚಿಕಿತ್ಸೆ ಲಭಿಸುತ್ತಿಲ್ಲ. ದಯವಿಟ್ಟು ಅವರ ನೆರವಿಗೆ ಬರಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ವಕೀಲರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಒಪ್ಪಿವೆ. ಆದರೆ, ಆಮ್ಲಜನಕದ ವ್ಯವಸ್ಥೆ ಇರುವ ಹಾಸಿಗೆ ಒದಗಿಸಬಹುದೇ ವಿನಾ ಐಸಿಯು ಒದಗಿಸಲು ಸಾಧ್ಯವಿಲ್ಲ ಎಂದಿವೆ. ವಕೀಲರಿಗೆ ಆರ್ಥಿಕ ನೆರವು ಬೇಕಿಲ್ಲ. ಸರ್ಕಾರವನ್ನಾಗಲಿ, ವ್ಯವಸ್ಥೆಯನ್ನಾಗಲಿ ಟೀಕಿಸಲು ನಾವು ಬಯಸುವುದಿಲ್ಲ. ನಮ್ಮಲ್ಲಿ ನಾಲ್ಕೈದು ಕೋಟಿ ರೂಪಾಯಿಯಷ್ಟು ನಿಧಿ ಇದೆ. ಸಾಲದಿದ್ದರೆ ವಕೀಲ ಮಿತ್ರರಿಂದ ಇನ್ನಷ್ಟು ಹಣವನ್ನು ಸಂಗ್ರಹಿಸುತ್ತೇವೆ. ತುರ್ತು ಸಂದರ್ಭಗಳಲ್ಲಿ ಸರಿಯಾದ ಚಿಕಿತ್ಸೆ ಲಭಿಸಬೇಕು ಎಂದಷ್ಟೇ ನಾವು ಬಯಸುತ್ತೇವೆ’ ಎಂದು ಗುಪ್ತಾ ಹೇಳಿದರು.

ದ್ವಾರಕಾದಲ್ಲಿ ಇಂದಿರಾಗಾಂಧಿ ಅವರ ಹೆಸರಿನಲ್ಲಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆಯ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ. ಅದರಲ್ಲಿ ವಕೀಲರಿಗಾಗಿ 100 ಆಮ್ಲಜನಕ ವ್ಯವಸ್ಥೆ ಇರುವ ಹಾಸಿಗೆಗಳ ವ್ಯವಸ್ಥೆ ಮಾಡಿಸಲು ಸೂಚನೆ ನೀಡಬೇಕು ಎಂದು ಅವರು ನ್ಯಾಯಾಲಯವನ್ನು ವಿನಂತಿಸಿದರು.

‘ನಿಮ್ಮ ನೋವು ನಮಗೆ ಅರ್ಥವಾಗುತ್ತದೆ. ನಾವೂ ಅದೇ ಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಕೋವಿಡ್‌ನ ಈ ಅಲೆಯು ಎಷ್ಟು ಅಪಾಯಕಾರಿಯಾಗಿದೆ ಎಂದರೆ, ಈ ಮಟ್ಟದಲ್ಲಿ ಅದು ಅಪ್ಪಳಿಸಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಇಲ್ಲಿ ಹಣಕಾಸಿನ ಸಮಸ್ಯೆ ಇಲ್ಲ. ಸೌಲಭ್ಯಗಳದ್ದೇ ಸಮಸ್ಯೆ. ಈ ವಿಚಾರದಲ್ಲಿ ರಾಜ್ಯವು ವಿಫಲವಾಗಿದೆ’ ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.