ADVERTISEMENT

ಪರೀಕ್ಷೆಯ ಪಾವಿತ್ರ್ಯ ಹಾಳು: ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಪಿಟಿಐ
Published 10 ಮಾರ್ಚ್ 2025, 15:21 IST
Last Updated 10 ಮಾರ್ಚ್ 2025, 15:21 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಸರ್ಕಾರಿ ಹುದ್ದೆ ಭರ್ತಿಗೆ ನಡೆದ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಯನ್ನು ಬಳಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ಬಗೆಯ ಅಪರಾಧಗಳು, ಜನರು ಆಡಳಿತದ ಮೇಲೆ ಮತ್ತು ಕಾರ್ಯಾಂಗದ ಮೇಲೆ ಇರಿಸಿರುವ ವಿಶ್ವಾಸಕ್ಕೆ ಧಕ್ಕೆ ತರುತ್ತವೆ ಎಂದು ಹೇಳಿದೆ.

ಜಾಮೀನು ನೀಡಿ ರಾಜಸ್ಥಾನ ಹೈಕೋರ್ಟ್ ಹೊರಡಿಸಿದ್ದ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರು ಇರುವ ವಿಭಾಗೀಯ ಪೀಠವು ಮಾನ್ಯ ಮಾಡಿದೆ.

ADVERTISEMENT

‘ಒಮ್ಮೆ ಜಾಮೀನು ನೀಡಿದ ನಂತರ ಅದನ್ನು ಸಾಮಾನ್ಯವಾಗಿ ರದ್ದುಪಡಿಸಬಾರದು ಎಂಬುದು ನಮಗೆ ಅರಿವಿದೆ. ಈ ನಿಲುವನ್ನು ನಾವು ಹೃದಯಪೂರ್ವಕವಾಗಿ ಒಪ್ಪುತ್ತೇವೆ. ಆದರೆ ಇಲ್ಲಿ ಆರೋಪಿಗಳು ನಡೆಸಿದ್ದಾರೆ ಎನ್ನಲಾದ ಕೃತ್ಯದ ಒಟ್ಟಾರೆ ಪರಿಣಾಮ ಮತ್ತು ಸಮಾಜದ ಮೇಲೆ ಆಗುವ ಪರಿಣಾಮವನ್ನು ಗಮನದಲ್ಲಿ ಇರಿಸಿಕೊಂಡು ಈ ನಿಲುವು ತೆಗೆದುಕೊಳ್ಳಲಾಗಿದೆ’ ಎಂದು ಪೀಠವು ಜಾಮೀನು ರದ್ದುಪಡಿಸುವಾಗ ಹೇಳಿದೆ.

ಇಂದ್ರಾಜ್ ಸಿಂಗ್ ಎನ್ನುವ ವ್ಯಕ್ತಿ ‘ಸಹಾಯಕ ಸಿವಿಲ್ ಎಂಜಿನಿಯರ್ (ಸ್ವಾಯತ್ತ ಸರ್ಕಾರಿ ಇಲಾಖೆ) ಸ್ಪರ್ಧಾತ್ಮಕ ಪರೀಕ್ಷೆ 2022’ರಲ್ಲಿ ಅಕ್ರಮ ಎಸಗಿದ್ದು, ತಮ್ಮ ಪರವಾಗಿ ನಕಲಿ ಅಭ್ಯರ್ಥಿಯೊಬ್ಬ ಪರೀಕ್ಷೆ ಬರೆಯುವಂತೆ ಮಾಡಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಮಾರ್ಚ್‌ 7ರಂದು ನೀಡಿರುವ ತೀರ್ಪಿನಲ್ಲಿ ವಿಭಾಗೀಯ ಪೀಠವು, ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಎರಡು ವಾರಗಳಲ್ಲಿ ಶರಣಾಗಬೇಕು ಎಂದು ಆರೋಪಿಗಳಿಗೆ ಸೂಚಿಸಿದೆ. ಆರೋಪಿಗಳು ತಮ್ಮ ಲಾಭಕ್ಕಾಗಿ ಪರೀಕ್ಷೆಯ ಪಾವಿತ್ರ್ಯವನ್ನು ಹಾಳುಮಾಡಲು ಯತ್ನಿಸಿದರು, ಇದರಿಂದಾಗಿ ಹಲವು ಅಭ್ಯರ್ಥಿಗಳ ಮೇಲೆ ಪರಿಣಾಮ ಉಂಟಾಯಿತು ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.